ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಘಟ್ಟ ಪ್ರದೇಶ, ಕುಮಾರಪರ್ವತ ಭಾಗಗಳಲ್ಲಿ ಸುರಿದ ಭಾರೀ ಮಳೆಗೆ ಪುಣ್ಯ ನದಿ ಕುಮಾರಧಾರಾವು ಮೈದುಂಬಿ ಹರಿಯುತ್ತಿದೆ. ನದಿಯ ಪ್ರವಾಹದಿಂದಾಗಿ ಬುಧವಾರ ಕುಮಾರಧಾರಾ ಸ್ನಾನಘಟ್ಟವು ಮುಳುಗಡೆಗೊಂಡಿದೆ. ಅಲ್ಲದೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಅವಭೃತ ಕಟ್ಟೆಯು ಭಾಗಶಃ ಜಲಾವೃತಗೊಂಡಿದೆ.ರಾತ್ರಿ ವೇಳೆಗೆ ಕುಮಾರಧಾರದಲ್ಲಿನ ಲಗೇಜ್ ಕೊಠಡಿ ತನಕ ನೀರು ವ್ಯಾಪಿಸಿದೆ.
ಪ್ರವಾಹದಿಂದ ಕುಮಾರಧಾರಾ ಕಿಂಡಿ ಆಣೆಕಟ್ಟು ಸಂಪೂರ್ಣ ಮುಳುಗಡೆಯಾಗಿದೆ. ಕುಮಾರಧಾರಾ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಭಕ್ತರು ನದಿ ದಡ ದಲ್ಲೇ ತೀರ್ಥಸ್ನಾನ ಮಾಡಿದರು. ದೇವಳದಿಂದ ವ್ಯವಸ್ಥೆ ಮಾಡಿದ ಡ್ರಮ್‌ಗಳಲ್ಲಿ ತುಂಬಿದ್ದ ಪುಣ್ಯತೀರ್ಥದಲ್ಲಿ ಭಕ್ತರು ಸ್ನಾನ ಮಾಡಿದರು.
ನಿರಂತರ ಪಹರೆ
ನದಿ ದಡದಲ್ಲಿ ವಿಪತ್ತು ನಿರ್ವಹಣೆ ಪಡೆ ಸನ್ನದ್ಧವಾಗಿದ್ದು, ತೆಪ್ಪ ಸೇರಿದಂತೆ ಇತರ ಪರಿಕರಗಳೊಂದಿಗೆ ದಡದಲ್ಲಿ ಬೀಡುಬಿಟ್ಟಿದೆ.ನದಿ ದಡದಲ್ಲಿ ಶ್ರೀ ದೇವಳದ ಭದ್ರತಾ ಸಿಬ್ಬಂದಿಗಳು ಮತ್ತು ಗೃಹ ರಕ್ಷಕ ಸಿಬ್ಬಂದಿಗಳು ನಿರಂತರವಾಗಿ ಪಹರೆ ಕಾರ್ಯವನ್ನು ದಿನದ ೨೪ ಗಂಟೆಯೂ ಮಾಡುತ್ತಿದ್ದಾರೆ.
ಜಳಕದ ಕಟ್ಟೆ ಭಾಗಶಃ ಜಲಾವೃತ
ಕುಮಾರಧಾರಾ ನದಿಯಲ್ಲಿನ ಪ್ರವಾಹದಿಂದಾಗಿ ನದಿ ತಟದಲ್ಲಿನ ಶ್ರೀ ದೇವರ ಜಳಕದ ಕಟ್ಟೆ ಭಾಗಶಃ ಜಲಾವೃತಗೊಂಡಿದೆ.ನದಿ ತಟದಲ್ಲಿನ ಶೌಚಾಲಯ ಕಟ್ಟಡ, ಡ್ರೆಸ್ಸಿಂಗ್ ಕೊಠಡಿಗಳು ಭಾಗಶಃ ಮುಳುಗಡೆಯಾಗಿದೆ. ಕುಮಾರಧಾರಾ ನದಿಯಲ್ಲಿನ ಪ್ರವಾಹವು ಹೆಚ್ಚಾಗುತ್ತಿದ್ದು ನದಿಯು ಕುಮಾರಧಾರಾದಲ್ಲಿನ ಶ್ರೀ ದೇವಳದ ಲಗೇಜ್ ಕೊಠಡಿ ತನಕ ಆವರಿಸಿದೆ. ಕುಮಾರಧಾರಾ ಉಪನದಿ ದರ್ಪಣತೀರ್ಥ ಕೂಡ ಮಳೆನೀರಿನಿಂದ ತುಂಬಿ ಹರಿಯುತಿದೆ .ಇದರಿಂದಾಗಿ ಈ ನದಿ ಪರಿಸರದ ಕೃಷಿ ತೋಟಗಳಿಗೆ ನದಿ ನೀರು ನುಗ್ಗಿದೆ.ಇದರಿಂದಾಗಿ ಅಡಿಕೆ,ತೆಂಗು ನೀರುಪಾಲಾಗಿದೆ.ನೀರಿನಿಂದಾಗಿ ತೋಟದಲ್ಲಿನ ಬಾಳೆಗಿಡಗಳು ಧರಾಶಾಹಿಯಾಗಿದೆ.