ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸತಲೆಮಾರಿನ ಖಂಡಾಂತರ ಕ್ಷಿಪಣಿ ʼಅಗ್ನಿ ಪ್ರೈಮ್ʼ ಅನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯಶಸ್ವಿಯಾಗಿ ಹಾರಾಟ ನಡೆಸಿದೆ.
ಒಡಿಶಾದ ಕರಾವಳಿ ಭಾಗದಲ್ಲಿರುವ ಡಾ.ಎಪಿಕೆ ಅಬ್ದುಲ್ ಕಲಾಂ ದ್ವೀಪದಿಂದ ಜೂ.7ರ ಸಂಜೆ 7.30ಕ್ಕೆ ಕ್ಷಿಪಣಿಯನ್ನು ಹಾರಿಸಲಾಯಿತು. ಹಾರಾಟದ ಸಮಯದಲ್ಲಿ ಕ್ಷಿಪಣಿ ತನಗೆ ನಿಯೋಜಿಸಲಾಗಿದ್ದ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದೆ ಎಂದು ರಕ್ಷಣಾ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಅಗ್ನಿ ಪ್ರೈಮ್ ಕ್ಷಿಪಣಿಯನ್ನು ಈ ಹಿಂದೆ ಮೂರು ಬಾರಿ ಪರೀಕ್ಷೆ ನಡೆಸಲಾಗಿದೆ. ಈಗ ಮಾಡಲಾಗಿರುವುದು ಪ್ರಿ ಇಂಡಕ್ಷನ್ ನೈಟ್ ಲಾಂಚ್ ಎಂದು ತಿಳಿಸಲಾಗಿದೆ. ರೇಡಾರ್, ಟೆಲಿಮೆಟ್ರಿ, ಎಲೆಕ್ಟ್ರೋ ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್, ಡೌನ್ ರೇಂಜ್ ಸೇರಿ ಅನೇಕ ಉಪಕರಣಗಳನ್ನು ಕ್ಷಿಪಣಿಯ ವಿವಿಧ ಸ್ಥಳಗಳಲ್ಲಿ ಇರಿಸಲಾಗಿತ್ತು. ಅವುಗಳು ಕ್ಷಿಪಣಿಯ ಹಾರಾಟದ ಪಥದ ಡೇಟಾವನ್ನು ಸೆರೆ ಹಿಡಿಯುವುದಕ್ಕೆ ಸಹಕರಿಸಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಅಗ್ನಿ ಪ್ರೈಮ್ ಕ್ಷಿಪಣಿಯ ಹಾರಾಟದ ಯಶಸ್ಸಿಗೆ ಡಿಆರ್‌ಡಿಒ ಮತ್ತು ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್‌ನ ಹಿರಿಯ ಅಧಿಕಾರಿಗಳು ಸಾಕ್ಷಿಯಾದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ‘ಅಗ್ನಿ ಪ್ರೈಮ್’ ನ ಯಶಸ್ಸಿಗೆ DRDO ಮತ್ತು ಸಶಸ್ತ್ರ ಪಡೆಗಳನ್ನು ಅಭಿನಂದಿಸಿದರು.