ಹೊಸದಿಗಂತ ವರದಿ, ಬೆಂಗಳೂರು:
ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಅಮೆಜಾನ್ ಡೆಲಿವರಿ ಬಾಯ್ ಅತೀವೇಗವಾಗಿ ವಾಹನವನ್ನು ಚಲಾಯಿಸಿಕೊಂಡು ಬಂದು ಹಂಪ್ಸ್ ಬಳಿ ಏಕಾಏಕಿ ದ್ವಿಚಕ್ರ ವಾಹನದ ಬ್ರೇಕ್ ಹಾಕಿ ಆತ ಹಾರಿಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.
ಬೊಮ್ಮಸಂದ್ರ ನಿವಾಸಿ ಅಭಿಷೇಕ್ (26) ಮೃತ ವ್ಯಕ್ತಿ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೆಜಾನ್ ಕಂಪನಿಯಲ್ಲಿ ಡೆಲಿವರಿ ಬಾಯ್ ಕೆಲಸ ಮಾಡುತ್ತಿದ್ದ ಈತ, ಕೋನಪ್ಪ ಅಗ್ರಹಾರ ಜಂಕ್ಷನ್ ಕಡೆಯಿಂದ ಹೊಸೂರು ರಸ್ತೆ ಜಂಕ್ಷನ್ ಕಡೆಯತ್ತ ಗುರುವಾರ ತಡರಾತ್ರಿ 11.40 ರ ಸುಮಾರಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಇದೇ ಮಾರ್ಗ ಮಧ್ಯೆ ಬೆರಟೇನ ಅಗ್ರಹಾರ ಮೆಟ್ರೋ ನಿಲ್ದಾಣ ಬಳಿ ರಸ್ತೆಯಲ್ಲಿ ಹಂಪ್ ಇರುವುದು ಗಮನಿಸಿ ಕೂಡಲೇ ಬ್ರೇಕ್ ಹಾಕಿದಾಗ ದ್ವಿಚಕ್ರ ವಾಹನದ ನಿಯಂತ್ರಣ ತಪ್ಪಿ ಹಾರಿ ಬಿದ್ದಿದ್ದಾನೆ. ಇದರ ಪರಿಣಾಮ ತೀವ್ರರಕ್ತಸ್ರಾವವಾಗಿ ಪ್ರಜ್ಞೆ ಕಳೆದುಕೊಂಡಿದ್ದ. ಕೂಡಲೇ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ದೃಢಪಡಿಸಿದರು ಎಂದು ಪೊಲೀಸರು ಹೇಳಿದರು.