ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ವರ್ಷ ಇದೇ ಸಮಯದಲ್ಲಿ ಗಗನಕ್ಕೇರಿದ್ದ ತೊಗರಿ ಬೇಳೆ ಬೆಲೆ ಈ ವರ್ಷ ಗಣನೀಯವಾಗಿ ಕುಸಿತ ಕಂಡಿದ್ದು, ಗ್ರಾಹಕರಲ್ಲಿ ಹರ್ಷ ಮನೆ ಮಾಡಿದೆ. ಆದರೆ ರೈತರಿಗೆ ಇದರಿಂದ ನಿರಾಸೆಯಾಗಿದೆ.
ಗಗನದತ್ತ ಮುಖ ಮಾಡಿದ್ದ ತೊಗರಿ ಬೇಳೆ ಬೆಳೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ದೇಶದಲ್ಲಿ ಇಳುವರಿ ಹೆಚ್ಚಾದ ಹಿನ್ನಲೆಯಲ್ಲಿ ಬೆಲೆಯಲ್ಲಿ ಕೂಡ ಕುಸಿತ ಕಂಡುಬಂದಿದೆ ಎನ್ನಲಾಗಿದೆ.
ಇದರಿಂದಾಗಿ ಕೈಗೆಟಕುವ ದರದಲ್ಲಿ ಗ್ರಾಹಕರು ತೊಗರಿ ಬೇಳೆ ಖರೀದಿಸಲು ಸಾಧ್ಯವಾಗುತ್ತಿದೆ. ಆದರೆ, ಕಳೆದ ವರ್ಷ ಕ್ವಿಂಟಲ್‌ಗೆ 12 ಸಾವಿರಕ್ಕೆ ಏರಿಕೆ ಕಂಡಿದ್ದ ತೊಗರಿ ದರ ಈ ಬಾರಿ 6,500ರಿಂದ 7 ಸಾವಿರ ರೂ ಆಸುಪಾಸಿಗೆ ಕುಸಿದಿದೆ.
ತೊಗರಿ ಕಣಜ ಎಂದೇ ಖ್ಯಾತಿ ಪಡೆದಿರುವ ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಹೆಚ್ಚಿನ ಇಳುವರಿ ಬಂದಿರುವುದರ ಜೊತೆಗೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿಯೂ ಉತ್ಪಾದನೆ ಹೆಚ್ಚಿದ ಪರಿಣಾಮ ತೊಗರಿ ಬೇಳೆಯ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.
ಅಲ್ಲದೆ ಕೇಂದ್ರ ಸರ್ಕಾರವು ಬರ್ಮಾ, ಘಾನಾ, ದಕ್ಷಿಣ ಆಫ್ರಿಕಾ ದೇಶಗಳಿಂದ ಈ ಬಾರಿ ತೊಗರಿಯನ್ನು ಆಮದು ಮಾಡಿಕೊಂಡಿದ್ದರಿಂದ ತೊಗರಿ ಸಂಗ್ರಹ ಯಥೇಚ್ಛವಾಗಿದೆ. ದಾಲ್ ಮಿಲ್‌ಗಳು ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಬೇಳೆಯನ್ನು ಉತ್ಪಾದನೆ ಮಾಡಿವೆ ಎಂದು ಹೇಳಲಾಗಿದೆ.