ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ (Pakistan) ವಾಯುವ್ಯ ಪೇಶಾವರದ ಮಸೀದಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದ (Suicide Bomb Blast) ಸ್ಥಳದಲ್ಲಿ ಶಂಕಿತ ಉಗ್ರನ ತುಂಡರಿಸಿದ ತಲೆ ಪತ್ತೆಯಾಗಿದೆ.
ಸಾವಿನ ಸಂಖ್ಯೆ 93ಕ್ಕೆ ಏರಿಕೆಯಾಗಿದ್ದು 221 ಮಂದಿ ತೀವ್ರ ಗಾಯಗೊಂಡಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮುಗಿದ ಬಳಿಕ ಸ್ಫೋಟದ ನಿಖರ ಸ್ವರೂಪ ತಿಳಿಯಲಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಪಾಕಿಸ್ತಾನಿ ತಾಲಿಬಾನ್ (Pakistani Taliban) ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಆತ್ಮಾಹುತಿ ದಾಳಿಯ ಹೊಣೆ ಹೊತ್ತಿದೆ. ಇದು ಕಳೆದ ಆಗಸ್ಟ್ನಲ್ಲಿ ಅಫ್ಘಾನಿಸ್ತಾನದಲ್ಲಿ ಹತ್ಯೆಗೀಡಾದ ಟಿಟಿಪಿ ಕಮಾಂಡರ್ ಉಮರ್ ಖಾಲಿದ್ ಖುರಾಸಾನಿಯ ಪ್ರತೀಕಾರದ ದಾಳಿಯ ಭಾಗವಾಗಿದೆ ಎಂದು ಹೇಳಿದೆ.
ಪಾಕಿಸ್ತಾನದ ಪೇಶಾವರದ ಮಸೀದಿಯೊಂದರಲ್ಲಿ ಸೋಮವಾರ (ಜ.30) ಮಧ್ಯಾಹ್ನ 1:40 ಸುಮಾರಿಗೆ ಝುಹರ್ ನಮಾಜ್ ಬಳಿಕ ಆತ್ಮಾಹುತಿ ಬಾಂಬ್ ಸ್ಫೋಟ ಸಂಭವಿಸಿತ್ತು.