ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಧಿಕಾರಿಗಳು ಎಲ್ಲ ರೀತಿಯ ಕ್ರಮ ಕೈಗೊಂಡರೂ ರಾಜಸ್ಥಾನ ಕೋಟಾದಲ್ಲಿ ಆತ್ಮಹತ್ಯೆಗಳು ನಿಂತಿಲ್ಲ. ವಿದ್ಯಾರ್ಥಿಗಳ ಆತ್ಮಹತ್ಯೆ ಮುಂದುವರಿದಿದೆ. ಕಳೆದ 24ಗಂಟೆಯೊಳಗೆ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಆತಂಕಕಾರಿ ಗಟನೆ ನಡೆದಿದೆ.
ಮಹಾರಾಷ್ಟ್ರ ಮೂಲದ ಆವಿಷ್ಕರ್ ಎಂಬ ವಿದ್ಯಾರ್ಥಿ ಭಾನುವಾರ (ಆ.27) ಕೋಚಿಂಗ್ ಸೆಂಟರ್ ಕಟ್ಟಡದ 6ನೇ ಮಹಡಿಯಿಂದ ಜಿಗಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದರೊಂದಿಗೆ ಈ ವರ್ಷ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ 22ಕ್ಕೆ ತಲುಪಿದೆ. ಆವಿಷ್ಕರ್ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಭಾನುವಾರ ವಾರದ ಪರೀಕ್ಷೆ ಬರೆದು ಪರೀಕ್ಷೆ ಹಾಲ್‌ನಿಂದ ಹೊರ ಬಂದ ಕೆಲವೇ ಕ್ಷಣಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮತ್ತೊಂದು ಘಟನೆಯಲ್ಲಿ ಶನಿವಾರ ವಿದ್ಯಾರ್ಥಿಯೊಬ್ಬ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾನೆ. ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಆದರ್ಶ್ ರಾಜ್ ಎಂಬುವರು ರಾತ್ರಿ 7 ಗಂಟೆ ಸುಮಾರಿಗೆ ತನ್ನ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೇಶದ ಎಲ್ಲಾ ಭಾಗಗಳಿಂದ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ನಾಗರಿಕ ಸೇವೆಗಳ ಪರೀಕ್ಷೆಗಳಿಗೆ ತಯಾರಿ ನಡೆಸಲು ವಿದ್ಯಾರ್ಥಿಗಳು ಈ ಕೋಚಿಂಗ್ ಸೆಂಟರ್‌ಗೆ ಬರುತ್ತಾರೆ. ಆದರೆ, ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ ಸಹ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಲ್ಲಿ ಆತಂಕ ಮೂಡಿಸುತ್ತಿದೆ.
ಈ ತಿಂಗಳೊಂದರಲ್ಲೇ ಇದುವರೆಗೆ 5 ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ ಎಂಟು ವರ್ಷಗಳಲ್ಲಿ ಒಂದು ತಿಂಗಳೊಳಗೆ ಇಷ್ಟೊಂದು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.