Friday, January 9, 2026

ಸುಜಾತ ಹಂಡಿ ದೌರ್ಜನ್ಯ ಕೇಸ್‌: ಕಾಂಗ್ರೆಸ್‌ ಆಯೋಜಿತ ಗೂಂಡಾಗಿರಿ ಎಂದ ರಾಜ್ಯ ಮಹಿಳಾ‌ ಮೋರ್ಚಾ ಅಧ್ಯಕ್ಷೆ

ಹೊಸದಿಗಂತ ವರದಿ ಹುಬ್ಬಳ್ಳಿ:

ಸುಜಾತ ಹಂಡಿ ಅವರ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ್ದು, ಕಾಂಗ್ರೆಸ್ ಆಯೋಜಿತ ಗುಂಡಾಗಿರಿಯಾಗಿದೆ. ಈ ಘಟನೆಯ ಸಂಪೂರ್ಣ ಮಾಹಿತಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನೀಡಿ ಸೂಕ್ತ ತನಿಖೆಗೆ ಮನವಿ ಸಲ್ಲಿಸಲಾಗುವುದು ಎಂದು ಬಿಜೆಪಿ ರಾಜ್ಯ ಮಹಿಳಾ‌ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ತಿಳಿಸಿದರು.

ಇಲ್ಲಿಯ ಚಾಲುಕ್ಯ ನಗರದಲ್ಲಿರುವ ಸುಜಾತ ಹಂಡಿ ಅವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಬಳಿಕ‌ ಮಾಧ್ಯಮದವರೊಂದಿಗೆ ಮಾತನಾಡಿದರು.

ಸುಜಾತ ಹಾಗೂ ಅವರ ಕುಟುಂಬದವರಿಗೆ ಆಗಿರುವ ಅನ್ಯಾಯದ ಬಗ್ಗೆ ಮಾಹಿತಿ ಪಡೆದಿದ್ದೇನೆ. ಕೇಶ್ವಾಪುರ ಇನ್ಸ್ ಪೆಕ್ಟರ್ ಕೆ.ಎಸ್. ಹಟ್ಟಿ ಪೊಲೀಸ್ ಬ್ಯಾಡ್ಜ್ ಹಾಕಿಕೊಂಡು ರೌಡಿಗಳ ಹಾಗೂ ಪುಡಾರಿಗಳ ಹಾಗೇ ದೌರ್ಜನ್ಯ ಮಾಡಿದ್ದಾನೆ. ಆತನನ್ನು ತಕ್ಷಣ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: Women Fashion | ಸೀರೆ ಜತೆಗೆ ಜಾಕೆಟ್ ಮ್ಯಾಚ್ ಆಗುತ್ತಾ? ಚಳಿಗಾಲದಲ್ಲಿ ಇವೆರಡರ ಜೋಡಿ ಹೇಗಿರುತ್ತೆ?

ರಾಜ್ಯ ಮಹಿಳೆಯರಿಗೆ ಸುರಕ್ಷತೆ ನೀಡಬೇಕಾದ ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರು ಆ ಮಹಿಳೆಯ ತಪ್ಪು ಮಾಡಿದ್ದಾರೆ ಎಂದು ಹೇಳಿಕೆ ನೀಡಿರುವುದು ಖಂಡನೀಯ.

ಮಹಿಳೆಯರಿಗೆ ಕೊಡುವ ಸುರಕ್ಷತೆ ಇದೇನಾ? ೪೦ ಕ್ಕೂ ಹೆಚ್ಚು ಪೊಲೀಸರು ಅವಳ ಮೇಲೆ ದೌರ್ಜನ್ಯ ಮಾಡಿದ್ದಾರೆ.
ಇವರಿಗೆ ಮಾನ, ಮರ್ಯಾದೆ, ಘನತೆ, ಗೌರವ ಇಲ್ವಾ? ಲಜ್ಜಗೆಟ್ಟ ಸರ್ಕಾರ ಇದು. ಪುಂಡರ‌ ಕೈಯಲ್ಲಿ ಕಾನೂನು ಸುವ್ಯವಸ್ಥೆ ನೀಡಿದ ಬಂಡ ಸರ್ಕಾರವಾಗಿದೆ ಎಂದು ಕಿಡಿಕಾರಿದರು.

ಪಾಲಿಕೆ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಬಡವರ ಮನೆಗಳ ಕಬ್ಜಾ ಮಾಡುತ್ತಿದ್ದಾರೆ. ಅವರನ್ನು ತಕ್ಷಣ ಬಂಧಿಸಬೇಕು. ರಾಷ್ಟ್ರೀಯ ಮಹಿಳಾ‌ ಆಯೋಗ ತನಿಖೆ ಮಾಡಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದರು.

ದೇಶದ ವಿಚಾರ ಕುರಿತು ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ನೇಹಾ ಹಿರೇಮಠ ಹಾಗೂ ಅಂಜಲಿ ಹತ್ಯೆಯಾಗಿದೆ. ಈಗ ಮಹಿಳೆ ಮೇಲೆ ದೌರ್ಜನ್ಯ ನಡೆದಿದ್ದು, ಏನು ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ದುರ್ಯೋಧನ, ದುಶಾಸನರಾಗಿದ್ದಾರೆ ಎಂದು ಹರಿಹಾಯ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ನ್ಯಾಯಾಧೀಶರು ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಬೇಕು. ತಪಿತಸ್ಥ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಅವರನ್ನು ಬಂಧಿಸಲು ಕ್ರಮ ವಹಿಸಬೇಕು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.

ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಈ ಪ್ರಕರಣದಿಂದ ಜಾರಿಕೊಳ್ಳಬಾರದು‌. ಸಂತ್ರಸ್ತ ಕುಟುಂಬಕ್ಕೆ ಭದ್ರತೆ ನೀಡಬೇಕು. ಇನ್ಸ ಪೆಕ್ಟರ್ ಹಟ್ಟಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್ ಸರ್ಕಾರ ಹೇಳಿದಂತೆ ಕೇಳುವುದು ಅಷ್ಟೇ ನಿಮ್ಮ ಕೆಲಸವಲ್ಲ ಎಂದು ತಿಳಿಸಿದರು.

ಸುಜಾತ ಹಂಡಿ ಮಹಿಳಾ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರೆ ಕಾನೂನು ಪ್ರಕಾರ ಕ್ರಮವಾಗಲಿ. ಪೊಲೀಸ್ ಇಲಾಖೆಯಿಂದ ಐದು ವಿಡಿಯೋ ಗಳಿವೆ. ಬಿಜೆಪಿ ರಾಜ್ಯ ಅಧ್ಯಕ್ಷರಿಗೆ ಘಟನೆ ಬಗ್ಗೆ ವರದಿ ನೀಡಲಾಗುವುದು. ಬಿಜೆಪಿ ಈ ಕುಟುಂಬದ ಜೊತೆ ಇರಲಿದ್ದು, ಸೂಕ್ತ ತನಿಖೆಯಾಗದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.

error: Content is protected !!