ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ ಗ್ರಾಮೀಣ ಪ್ರದೇಶಗಳಲ್ಲಿ ಗುರುವಾರ ಸುರಿದ ಭಾರಿ ಮಳೆಯಿದ ಭತ್ತದ ಗದ್ದೆಗಳು ಜಲಾವೃತಗೊಂಡಿವೆ. ಮಾವಿನ ತೋಟಗಳಿಗೆ ಹಾನಿಯಾಗಿದ್ದು, ಹಣ್ಣುಗಳು ನೆಲಕ್ಕುರುಳಿವೆ. ಯಾದದ್ರಿ ಭುವನಗಿರಿ, ಮೇಡ್ಚಲ್ ಮಲ್ಕಾಜ್‌ಗಿರಿ, ಮೇಡಕ್ ಮತ್ತು ಸಂಗಾರೆಡ್ಡಿ ಜಿಲ್ಲೆಗಳಲ್ಲಿ ಹಣ್ಣು ಮತ್ತು ತರಕಾರಿ ಬೆಳೆಗಳಿಗೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಹೈದರಾಬಾದ್‌ನ ಬಹುತೇಕ ಕಡೆ ಗುರುವಾರ ಮಧ್ಯಾಹ್ನದಿಂದ ರಾತ್ರಿ 8 ಗಂಟೆಯವರೆಗೆ ಜೋರು ಮಳೆಯಾಗಿದೆ. ಮೆಟ್ರೋ ನಿಲ್ದಾಣಗಳಲ್ಲಿ 8ರಿಂದ 9 ಸೆಂ.ಮೀ ಮಳೆ ಮಳೆಯಾಗಿದ್ದರೆ, ಇತರ 12 ನಿಲ್ದಾಣಗಳಲ್ಲಿ 7 ರಿಂದ 8 ಸೆಂ.ಮೀ ಮಳೆಯಾಗಿದೆ. ಉಪ್ಪಲ್, ಮಲಕ್‌ಪೇಟೆ, ಖೈರತಾಬಾದ್ ಮತ್ತು ಚಾದರ್ಘಾಟ್‌ನಂತಹ ಪ್ರಮುಖ ಪ್ರದೇಶಗಳಲ್ಲಿ ಬಸ್ ಸೇವೆಗಳು ಸ್ಥಗಿತಗೊಂಡಿದ್ದವು. ಬಾಗಲಿಂಗಂಪಳ್ಳಿಯ ಪದ್ಮಾ ಕಾಲೋನಿಯಲ್ಲಿ ದ್ವಿಚಕ್ರ ವಾಹನಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಇನ್ನು ಕರ್ನಾಟಕದಲ್ಲಿಯೂ ಜೋರು ಮಳೆಯಾಗುತ್ತಿದ್ದು, ರಸ್ತೆಗಳು ಹೊಂಡ ಬಿದ್ದಿವೆ, ಮಳೆಯಿಂದಾಗಿ ಗುಂಡಿಗಳಲ್ಲಿ ನೀರು ತುಂಬಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಒಡಿಶಾ ಕರಾವಳಿಯ ಸೈಕ್ಲೋನ್ ಎಫೆಕ್ಟ್‌ನಿಂದಾಗಿ ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ.