Saturday, January 3, 2026

ಭಾನುವಾರ ನಮಗೆ ನಿಮಗೆ ರಜೆ, ಆದ್ರೆ ಇವರಿಗಿಲ್ಲ ನೋಡಿ: ಫೆ.1ರಂದು ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಆರ್ಥಿಕ ದಿಕ್ಕು ನಿರ್ಧರಿಸುವ ಕೇಂದ್ರ ಬಜೆಟ್‌ಗಾಗಿ ರಾಷ್ಟ್ರದ ಗಮನ ಫೆಬ್ರವರಿ 1ರತ್ತ ನೆಟ್ಟಿದೆ. 2026ರ ಕೇಂದ್ರ ಬಜೆಟ್ ಅನ್ನು ಭಾನುವಾರವೇ ಮಂಡಿಸುವ ಸಾಧ್ಯತೆ ಹೆಚ್ಚಿದ್ದು, ಸರ್ಕಾರ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡುವ ಸೂಚನೆ ನೀಡಿಲ್ಲ. ಈ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುವ ನಿರೀಕ್ಷೆಯಿದೆ.

ಈ ಬಜೆಟ್ ಸೀತಾರಾಮನ್ ಅವರಿಗೆ ಮತ್ತೊಂದು ಮೈಲಿಗಲ್ಲಾಗಲಿದೆ. ಸತತ ಎಂಟನೇ ಬಾರಿ ಅವರು ಕೇಂದ್ರ ಬಜೆಟ್ ಮಂಡಿಸುತ್ತಿರುವುದು ವಿಶೇಷವಾಗಿದ್ದು, ಇದು ಸ್ವಾತಂತ್ರ್ಯ ನಂತರದ 80ನೇ ಬಜೆಟ್ ಆಗಿರಲಿದೆ. ವಾರ್ಷಿಕ ಬಜೆಟ್‌ಗೆ ಸಂಬಂಧಿಸಿದ ಆಡಳಿತಾತ್ಮಕ ಹಾಗೂ ಆರ್ಥಿಕ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ.

ಇದನ್ನೂ ಓದಿ:

ಸಾಂಪ್ರದಾಯಿಕವಾಗಿ ಫೆಬ್ರವರಿ 1ರಂದು ಬಜೆಟ್ ಮಂಡಿಸುವ ಪದ್ಧತಿಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದ್ದು, ಇದರಿಂದ ಹಣಕಾಸು ವರ್ಷದ ಆರಂಭಕ್ಕೂ ಮುನ್ನ ಸಂಸತ್ತಿನ ಪರಿಶೀಲನೆ ಹಾಗೂ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯ ಸಮಯ ದೊರೆಯುತ್ತದೆ. ವಾರಾಂತ್ಯದಲ್ಲಿ ಬಜೆಟ್ ಮಂಡನೆಯಾಗುವುದು ಅಪರೂಪದ ವಿಷಯವಲ್ಲ. 2025ರಲ್ಲಿ ಶನಿವಾರ ಬಜೆಟ್ ಮಂಡಿಸಿದ್ದ ಸೀತಾರಾಮನ್, 2015 ಮತ್ತು 2016ರಲ್ಲಿ ಮಾಜಿ ಸಚಿವ ಅರುಣ್ ಜೇಟ್ಲಿಯೂ ಶನಿವಾರವೇ ಬಜೆಟ್ ಮಂಡಿಸಿದ್ದರು.

ಈ ಬಾರಿ ಕೂಡ ನಿಗದಿತ ವೇಳಾಪಟ್ಟಿಯಂತೆ ಬಜೆಟ್ ಮಂಡನೆಯಾದರೆ, ಸೀತಾರಾಮನ್ ಸತತ ಒಂಬತ್ತು ಬಜೆಟ್‌ಗಳನ್ನು ಮಂಡಿಸಿದ ಮೊದಲ ಹಣಕಾಸು ಸಚಿವೆ ಎಂಬ ಗೌರವಕ್ಕೆ ಪಾತ್ರರಾಗಲಿದ್ದಾರೆ. ಇದು ಎರಡು ಅವಧಿಗಳಲ್ಲಿ 10 ಬಜೆಟ್‌ಗಳನ್ನು ಮಂಡಿಸಿದ್ದ ಮೊರಾರ್ಜಿ ದೇಸಾಯಿ ಅವರ ದಾಖಲೆಗೆ ಹತ್ತಿರವಾಗಲಿದೆ. ಇತರ ಪ್ರಮುಖ ಹಣಕಾಸು ಸಚಿವರಲ್ಲಿ ಪಿ. ಚಿದಂಬರಂ ಒಂಬತ್ತು ಹಾಗೂ ಪ್ರಣಬ್ ಮುಖರ್ಜಿ ಎಂಟು ಬಜೆಟ್‌ಗಳನ್ನು ಮಂಡಿಸಿದ್ದಾರೆ.

ಸಂಸತ್ತಿನ ಬಜೆಟ್ ಅಧಿವೇಶನದ ದಿನಾಂಕಗಳ ಕುರಿತು ಅಧಿಕೃತ ಘೋಷಣೆ ಇನ್ನೂ ಬಾಕಿ ಇದೆ.

error: Content is protected !!