ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗೆ ನಿಷೇಧಿತ ಸಿಗರೇಟ್ ಹಾಗೂ ಮಾದಕ ವಸ್ತುಗಳನ್ನು ಸಾಗಿಸಲು ಯತ್ನಿಸಿದ ಆರೋಪದ ಮೇಲೆ ಜೈಲು ವಾರ್ಡರ್ ಒಬ್ಬರನ್ನು ಬಂಧಿಸಲಾಗಿದೆ. ಬಂಧಿತ ವಾರ್ಡರ್ ಅನ್ನು ರಾಹುಲ್ ಪಾಟೀಲ್ ಎಂದು ಗುರುತಿಸಲಾಗಿದ್ದು, ಜೈಲು ಅಧೀಕ್ಷಕ ಪರಮೇಶ್ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಘಟನೆ ವಿವರ:
ಶುಕ್ರವಾರ ಸಂಜೆ ಸುಮಾರು 6:50ರ ಸುಮಾರಿಗೆ ವಾರ್ಡರ್ ರಾಹುಲ್ ಪಾಟೀಲ್ ಅವರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲು ಕಾರಾಗೃಹದ ಮುಖ್ಯ ದ್ವಾರದ ಬಳಿ ಬಂದಿದ್ದರು. ಈ ವೇಳೆ, ನಿಯಮದಂತೆ KSESF ಸಿಬ್ಬಂದಿ ತಪಾಸಣೆ ನಡೆಸಿದಾಗ ರಾಹುಲ್ ಅವರ ಬಳಿ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.
ತಪಾಸಣೆ ವೇಳೆ ಎರಡು ಸಿಗರೇಟ್ ಪ್ಯಾಕ್‌ಗಳು ಮತ್ತು ಸುಮಾರು 60 ಗ್ರಾಮ್‌ಗಳಷ್ಟು ಮಾದಕ ವಸ್ತುಗಳೆಂದು ಶಂಕಿಸಲಾದ ವಸ್ತು ಸಿಕ್ಕಿವೆ. ತಕ್ಷಣವೇ ಭದ್ರತಾ ಸಿಬ್ಬಂದಿ ಈ ವಿಷಯವನ್ನು ಹಿರಿಯ ಜೈಲು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
2018ರಲ್ಲಿ ಕಾರಾಗೃಹ ಇಲಾಖೆಗೆ ವಾರ್ಡರ್ ಆಗಿ ಸೇರ್ಪಡೆಯಾಗಿದ್ದ ರಾಹುಲ್ ಪಾಟೀಲ್ ಅವರು ಈ ಹಿಂದೆ ಬೆಳಗಾವಿ ಕಾರಾಗೃಹದಲ್ಲಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ವರ್ಷದ ಜೂನ್ 29ರಿಂದ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಘಟನೆ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೈಲು ಅಧೀಕ್ಷಕ ಪರಮೇಶ್ ಅವರು ನೀಡಿದ ದೂರಿನನ್ವಯ ಪೊಲೀಸರು ವಾರ್ಡರ್ ರಾಹುಲ್ ಪಾಟೀಲ್ ಅವರನ್ನು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಜೈಲಿನೊಳಗಿನ ಡ್ರಗ್ಸ್ ಜಾಲದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

