ಹೊಸದಿಗಂತ ಡಿಜಿಟಲ್ ಡೆಸ್ಕ್:
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಮತ್ತು ನ್ಯಾಮತಿ ಪ್ರದೇಶಗಳಲ್ಲಿ ರೈತರ ಹೋರಾಟ ಇಂದು ತೀವ್ರ ಸ್ವರೂಪ ಪಡೆದಿದೆ. ಕಬ್ಬು ಬೆಳೆಗಾರರ ದೀರ್ಘ ಹೋರಾಟದ ಹೊಗೆ ಇನ್ನೂ ಸಂಪೂರ್ಣ ಆರದಿರುವಾಗ, ಇದೀಗ ಭತ್ತ ಮತ್ತು ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳನ್ನು ತಕ್ಷಣ ಆರಂಭಿಸುವಂತೆ ಆಗ್ರಹಿಸಿ ಅನ್ನದಾತರು ಬೀದಿಗಿಳಿದಿದ್ದಾರೆ. ಬೆಳಿಗ್ಗೆಯಿಂದಲೇ ಪ್ರತಿಭಟನೆಗಳು ಜೋರಾಗಿದ್ದು, ಎರಡೂ ತಾಲೂಕುಗಳಲ್ಲಿ ಬಂದ್ ಜಾರಿಯಾಗಿದೆ.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಾಗೂ ರೈತ ಸಂಘಟನೆಗಳ ನೇತೃತ್ವದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ಬಂದ್‌ಗೆ ಕರೆ ನೀಡಲಾಗಿದ್ದು, ರಸ್ತೆ ತಡೆ, ಘೋಷಣೆ ನಡುವೆ ಪ್ರತಿಭಟನೆ ಮುಂದುವರೆದಿದೆ. ನ್ಯಾಮತಿ ಪಟ್ಟಣದಲ್ಲಿ ಟಯರ್‌ಗಳಿಗೆ ಬೆಂಕಿ ಹಚ್ಚಿ ರೈತರು ತಮ್ಮ ಅಸಮಾಧಾನ ಹೊರಹಾಕಿದ್ದು, ಪ್ರದೇಶದ ಸಾಮಾನ್ಯ ಸಂಚಾರ ಅಸ್ತವ್ಯಸ್ತಗೊಂಡಿದೆ.
ಇದೇ ಸಂದರ್ಭದಲ್ಲಿ ರೈತರು ಕೇಂದ್ರ ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರವೂ ಪ್ರತಿಕ್ವಿಂಟಾಲ್ 500 ರೂ. ಹೆಚ್ಚುವರಿ ನೀಡಬೇಕೆಂದು ಒತ್ತಾಯಿಸಿದ್ದಾರೆ. ಕಬ್ಬು ಬೆಳೆಗಾರರ ದೀರ್ಘ ಹೋರಾಟಕ್ಕೆ ಸರ್ಕಾರ ಇತ್ತೀಚೆಗೆ ಬೆಂಬಲ ಬೆಲೆಯನ್ನು 3,300 ರೂ.ಗೆ ಏರಿಸಿ ಪರಿಹಾರ ಕಂಡುಕೊಂಡಿದ್ದರೂ, ಈಗ ಹೊಸದಾಗಿ ಭತ್ತ–ಮೆಕ್ಕೆಜೋಳ ಬೆಳೆಗಾರರ ಹೋರಾಟ ತೀವ್ರಗೊಂಡಿದ್ದು, ಸರ್ಕಾರಕ್ಕೆ ಮತ್ತೆ ತಲೆಬಿಸಿ ಹೆಚ್ಚಿಸಿದೆ.

