ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದಲ್ಲಿ 12 ವರ್ಷ ಹಳೆಯದಾದ ಬಸ್ಗಳ ಚಾಲನೆಗೆ ಸಂಪೂರ್ಣವಾಗಿ ನಿರ್ಬಂಧ ವಿಧಿಸಿ ಅಲ್ಲಿನ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಈ ಮೂಲಕ 12 ವರ್ಷದ ಹಳೆಯ ಬಸ್ ಸಂಚಾರಕ್ಕೆ ಅವಕಾಶ ನೀಡಿದೆ.
2018ರ ಜನವರಿ 5 ರಂದು ಇಂದೋರ್ನಲ್ಲಿನ ನಡೆದ ಭೀಕರ ಅಪಘಾತದಲ್ಲಿ ಚಾಲಕ ಹಾಗೂ ಐದು ವಿದ್ಯಾರ್ಥಿಗಳು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು.ಇದಾದ ಬಳಿಕ ಅಂದಿನಿಂದ ಹಳೆಯ ಬಸ್ಗಳ ಕಾರ್ಯದಕ್ಷತೆ ಕುರಿತು ಪ್ರಶ್ನೆಗಳು ಎದ್ದಿದ್ದವು.
ಈ ಕಾರಣ 2024ರಲ್ಲಿ ಇಂದೋರ್ ಹೈಕೋರ್ಟ್ ಮೊದಲ ಬಾರಿಗೆ 12 ವರ್ಷದ ಹಳೆಯ ಶಾಲಾ ಬಸ್ಗಳನ್ನು ರಸ್ತೆಗೆ ಇಳಿಸದಂತೆ ನಿರ್ಬಂಧ ವಿಧಿಸಿತು. ಹಾಗೇ ಸಾರ್ವಜನಿಕ ಸಾರಿಗೆ ಕುರಿತು ಅನೇಕ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ಈ ಆದೇಶದ ಅನುಸಾರ 12 ವರ್ಷದ ಹಳೆಯದಾದ ಶಾಲಾ ಬಸ್ಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವ ಜೊತೆಗೆ ಆಟೋದಲ್ಲಿ ಮೂರಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳನ್ನು ಕರೆತರುವಂತಿಲ್ಲ ಎಂದು ತಿಳಿಸಿತ್ತು ಎಂದು ವಕೀಲ ಮನೀಶ್ ಯಾದವ್ ಹೇಳಿದ್ದಾರೆ.
ಇದಾದ ಬಳಿಕ ಹೈ ಕೋರ್ಟ್, 12 ವರ್ಷ ಮೀರಿದ ಸಾರ್ವಜನಿಕ ಸಾರಿಗೆಯ ಬಸ್ಗಳನ್ನು ಕೂಡಾ ನಿರ್ಬಂಧ ವಿಧಿಸಿ ಆದೇಶಿಸಿತ್ತು.
ಹೀಗಾಗಿ ಹೈಕೋರ್ಟ್ನ ಈ ಆದೇಶದ ಮೇರೆಗೆ ಇಂದೋರ್ನ ಸಾಮಾಜಿಕ ಕಾರ್ಯಕರ್ತ ಪಂಕಜ್ ಸಾಂಗ್ವಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು . ಅದರಲ್ಲಿ, ಉತ್ತರ ಪ್ರದೇಶ ಮತ್ತು ಬಿಹಾರ ಸೇರಿದಂತೆ ಇತರ ರಾಜ್ಯದಲ್ಲಿ 15 ವರ್ಷದ ಹಳೆಯ ಬಸ್ ಸಂಚಾರಕ್ಕೆ ಅನುಮತಿ ಇದೆ. ಆದರೆ, ಮಧ್ಯಪ್ರದೇಶದಲ್ಲಿ 12 ವರ್ಷದ ಹಳೆಯ ಬಸ್ ಚಾಲನೆಗೆ ಅನುಮತಿ ನಿರ್ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಮಿತಿಯನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದರು.
ಈ ವಾದ ಆಲಿಸಿದ ಸುಪ್ರೀಂಕೋರ್ಟ್, ಹೈಕೋರ್ಟ್ ನೀಡಿದ್ದ ಆದೇಶಕ್ಕೆ ತಡೆ ನೀಡಿದೆ. ಮುಂದಿನ ವಿಚಾರಣೆವರೆಗೆ 12 ವರ್ಷ ಹಳೆಯ ಬಸ್ಗಳ ಮೇಲಿನ ನಿರ್ಬಂಧಕ್ಕೆ ತಡೆ ನೀಡುವಂತೆ ಹೇಳಿದೆ.