ಹೊಸ ದಿಗಂತ ಡಿಜಿಟಲ್ ಡೆಸ್ಕ್:
2001ರ ಜಯ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಬಾಂಬೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಕೇಂದ್ರೀಯ ತನಿಖಾ ದಳ(CBI) ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹತಾ ಅವರ ದ್ವಿಸದಸ್ಯ ಪೀಠ, ರಾಜನ್ ಒಟ್ಟು ಏಳು ಪ್ರಕರಣಗಳಲ್ಲಿ ದೋಷಿಯಾಗಿದ್ದು, 27 ವರ್ಷ ತಲೆಮರೆಸಿಕೊಂಡಿದ್ದ ಎಂಬುದನ್ನು ಉಲ್ಲೇಖಿಸಿದೆ.ಇಂತಹ ವ್ಯಕ್ತಿಗೆ ಶಿಕ್ಷೆಯನ್ನು ಏಕೆ ಸ್ಥಗಿತಗೊಳಿಸಲಾಯಿತು? ಎಂದು ಪ್ರಶ್ನಿಸಿತು.
ರಾಜನ್‌ರ ವಕೀಲರು ಸಾಕ್ಷ್ಯವಿಲ್ಲ ಎಂದು ವಾದಿಸಿದಾಗ, ಪೀಠ ಅದನ್ನು ತಿರಸ್ಕರಿಸಿತು. 71 ಪ್ರಕರಣಗಳಲ್ಲಿ 47ರಲ್ಲಿ CBIಗೆ ಸಾಕ್ಷ್ಯ ಸಿಗದಿರಲು ಕಾರಣ, ಸಾಕ್ಷಿಗಳು ಮುಂದೆ ಬರದಿರುವುದು ಎಂದು ಕೋರ್ಟ್ ಸ್ಪಷ್ಟಪಡಿಸಿತು. ರಾಜನ್ ಈಗಾಗಲೇ ಇತರ ಪ್ರಕರಣದಲ್ಲಿ ಜೈಲು ಶಿಕ್ಷೆಯಲ್ಲಿರುವ ಕಾರಣ, ಜಾಮೀನು ರದ್ದಾಯಿತು.
ಮುಂಬೈನ ಗಾಮದೇವಿಯ ಗೋಲ್ಡನ್ ಕ್ರೌನ್ ಹೋಟೆಲ್‌ನ ಮಾಲೀಕ ಜಯ ಶೆಟ್ಟಿಯನ್ನು ಮೇ 4, 2001ರಂದು ಛೋಟಾ ರಾಜನ್ ಗ್ಯಾಂಗ್‌ನ ಇಬ್ಬರು ಸದಸ್ಯರು ಗುಂಡಿಟ್ಟು ಕೊಂದಿದ್ದರು. ರಾಜನ್ ಗ್ಯಾಂಗ್‌ನ ಹೇಮಂತ್ ಪೂಜಾರಿಯಿಂದ ಶೆಟ್ಟಿಗೆ ವಸೂಲಿ ಕರೆ ಬಂದಿತ್ತು. ಹಣ ನೀಡದಿದ್ದಕ್ಕೆ ಈ ಕೊಲೆ ನಡೆದಿತ್ತು. ಕಳೆದ ವರ್ಷ ವಿಶೇಷ ನ್ಯಾಯಾಲಯವು ರಾಜನ್‌ಗೆ ಆಜೀವ ಕಾರಾಗೃಹ ಶಿಕ್ಷೆ ಮತ್ತು ₹16 ಲಕ್ಷ ದಂಡ ವಿಧಿಸಿತ್ತು.