Sunday, November 2, 2025

ಕರೂರು ಕಾಲ್ತುಳಿತ ಸ್ಥಳಕ್ಕೆ ಭೇಟಿ ನೀಡಲು ಮುಂದಾದ ಸುಪ್ರೀಂಕೋರ್ಟ್ ಸಮಿತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನ ಕರೂರು ಕಾಲ್ತುಳಿತ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯು ಘಟನಾ ಸ್ಥಳಕ್ಕೆ ಭೇಟಿ ನೀಡಲಿದೆ.

ಕರೂರಿನಲ್ಲಿ ಟಿವಿಕೆ ನಾಯಕ ವಿಜಯ್ ಅವರ ರ‍್ಯಾಲಿ ಸಂದರ್ಭದಲ್ಲಿ 41 ಜನರು ಸಾವನ್ನಪ್ಪಿದ್ದರು. ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಪಕ್ಷ ಸ್ವತಂತ್ರ ತನಿಖೆಗೆ ಕೋರಿ ಅರ್ಜಿ ಸಲ್ಲಿಸಿತ್ತು.

ಎಸ್‌ಐಟಿಯಲ್ಲಿ ತಮಿಳುನಾಡಿನ ಪೊಲೀಸರೇ ಇರುವುದರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಹೇಳಿತ್ತು. ಇದೀಗ ಅರ್ಜಿ ವಿಚಾರಣೆ ಬಳಿಕ ಕರೂರು ಕಾಲ್ತುಳಿತ ತನಿಖೆಯನ್ನು ಸಿಬಿಐಗೆ ವಹಿಸಿ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಅಲ್ಲದೇ ಈ ತನಿಖೆಯನ್ನು ಮೇಲ್ವಿಚಾರಣೆ ಮಾಡಲು ನಿವೃತ್ತ ನ್ಯಾಯಾಧೀಶರಾದ ಅಜಯ್ ರಸ್ತೋಗಿ ಅವರ ಅಧ್ಯಕ್ಷತೆಯಲ್ಲಿ ಮೂರು ಸದಸ್ಯರ ಸಮಿತಿಯನ್ನ ಕೂಡ ಸುಪ್ರೀಂ ಕೋರ್ಟ್ ರಚಿಸಿತ್ತು.

ಸದ್ಯ ಸುಪ್ರೀಂಕೋರ್ಟ್ ರಚಿಸಿದ ಸಮಿತಿಯು ಸಿಬಿಐ ನಿರ್ದೇಶಕರ ಬಳಿ ಕೆಲವು ದಾಖಲೆಗಳನ್ನು ಕೋರಿದ್ದು, ತನಿಖೆಯ ಭಾಗವಾಗಿ ಘಟನಾ ಸ್ಥಳಕ್ಕೆ ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯು ಭೇಟಿ ನೀಡಲಿದೆ ಎನ್ನಲಾಗಿದೆ.

error: Content is protected !!