ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಗೆ ಗ್ರೀನ್ ಸಿಗ್ನಲ್ ನೀಡಿದಂತಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ನೀಡಿರುವ ಸೂಚನೆ ವಿರೋಧಿಸಿ ಹಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಇಂದು ಅರ್ಜಿಗಳ ವಿಚಾರಣೆ ನಡೆಸಿರುವ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠ , ಚುನಾವಣಾ ಆಯೋಗ ಮಾಡುತ್ತಿರುವ ಕೆಲಸ ಸರಿ ಇದೆ.ಈ ಕ್ರಮ ಸಂವಿಧಾನದ ಆದೇಶಕ್ಕೆ ಅನುಗುಣವಾಗಿದೆ ಎಂದು ಹೇಳಿದೆ.
ಆದರೆ, ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ನಡೆಸುತ್ತಿರುವ ಸಮಯವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಬಿಹಾರದ ಅಸೆಂಬ್ಲಿ ಚುನಾವಣೆಗೆ ಕೆಲವೇ ತಿಂಗಳು ಮೊದಲು ಪಟ್ಟಿ ಪರಿಷ್ಕರಣೆಯನ್ನು ಪ್ರಶ್ನಿಸಿದೆ. ಚುನಾವಣೆಗೆ ಮುಂಚಿತವಾಗಿ ಒಬ್ಬ ವ್ಯಕ್ತಿಯನ್ನು ಮತದಾನದಿಂದ ವಂಚಿತಗೊಳಿಸಲಾಗುತ್ತಿದೆ. ಮತದಾರರ ಪಟ್ಟಿಯಿಂದ ವ್ಯಕ್ತಿಯ ಹೆಸರು ಅನ್ನು ಕೈ ಬಿಟ್ಟ ಬಳಿಕ ಅವರಿಗೆ ಮೇಲ್ಮನವಿ ಸಲ್ಲಿಸಲು ಹಾಗೂ ತಮ್ಮ ಹೆಸರು ಅನ್ನು ಮತ್ತೆ ಪಟ್ಟಿಗೆ ಸೇರಿಸಲು ಸಮಯ ಇರುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ಮತದಾರರ ತೀವ್ರ ಪರಿಷ್ಕರಣೆಯನ್ನು ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ, ಇದರಿಂದ ದೇಶದ ನಾಗರಿಕರಲ್ಲದವರು ಪಟ್ಟಿಯಲ್ಲಿ ಇರಲು ಅವಕಾಶ ಸಿಗಲ್ಲ. ಆದರೇ, ಈ ಚುನಾವಣೆ ಮುಗಿದ ಬಳಿಕ ಪ್ರತೇಕವಾಗಿ ಈ ಪರಿಷ್ಕರಣೆ ನಡೆಸಬಹುದಿತ್ತು ಎಂದು ಸುಪ್ರೀಂಕೋರ್ಟ್ ನ ಜಸ್ಟೀಸ್ ಜೋಯಮಾಲಾ ಬಗಚಿ ಹೇಳಿದ್ದರು. ಇದು ಬಹಳ ಮುಖ್ಯವಾದ ವಿಷಯವಾಗಿದ್ದು, ಪ್ರಜಾಪ್ರಭುತ್ವದ ಬುಡಕ್ಕೆ ಹೋಗುತ್ತೆ. ಅರ್ಜಿದಾರರು ಚುನಾವಣಾ ಆಯೋಗದ ಅಧಿಕಾರವನ್ನು ಮಾತ್ರವಲ್ಲದೇ, ಕಾರ್ಯವಿಧಾನವನ್ನು ಪ್ರಶ್ನಿಸಿದ್ದಾರೆ. ಅರ್ಜಿದಾರರ ಗುಂಪು ಎತ್ತಿರುವ ಪ್ರಮುಖವಾದ ಪ್ರಶ್ನೆಗಳನ್ನು ಸುಪ್ರೀಂಕೋರ್ಟ್ ಈಗ ಕೇಂದ್ರ ಚುನಾವಣಾ ಆಯೋಗಕ್ಕೆ ಕೇಳಿದೆ.
ಪ್ರಜಾಪ್ರತಿನಿಧಿ ಕಾಯಿದೆಯ ಯಾವ ಸೆಕ್ಷನ್ ನಡಿ ಮತದಾರರ ಪಟ್ಟಿ ಪರಿಷ್ಕರಣೆಯ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ ಎಂಬುದನ್ನು ವಿವರಿಸಲು ಸುಪ್ರೀಂಕೋರ್ಟ್ ಕೇಳಿದೆ. ವಿಶೇಷ ತೀವ್ರ ಪರಿಷ್ಕರಣೆ ಎಂಬುದು ಎಲ್ಲಿದೆ ಎಂದು ವಿವರಿಸಲು ಕೇಂದ್ರ ಚುನಾವಣಾ ಆಯೋಗವನ್ನು ಕೇಳಿದೆ. ಈ ಪ್ರಕ್ರಿಯೆಯನ್ನು 2025ರ ಬಿಹಾರ ಚುನಾವಣೆಗೆ ಏಕೆ ಲಿಂಕ್ ಮಾಡಿದೆ ಎಂದು ಚುನಾವಣಾ ಆಯೋಗವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.