ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಸಂಬಂಧ ಜಾರಿ ನಿರ್ದೇಶನಾಲಯ (ED) ವಿಧಿಸಿದ್ದ 10.65 ಕೋಟಿ ದಂಡವನ್ನು ಬಿಸಿಸಿಐ ಪಾವತಿಸಬೇಕೆಂಬ ಮಾಜಿ ಕ್ರಿಕೆಟ್ ಆಡಳಿತಾಧಿಕಾರಿ ಲಲಿತ್ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಆರ್. ಮಹಾದೇವನ್ ಅವರ ಪೀಠ, ಲಲಿತ್ ಮೋದಿ ಅವರು ಕಾನೂನಿನಡಿ ಲಭ್ಯವಿರುವ ನಾಗರಿಕ ಪರಿಹಾರಗಳಿಗಾಗಿ ಪ್ರಯತ್ನಿಸಬಹುದೆಂದು ಸೂಚಿಸಿತು. ಬಿಸಿಸಿಐ ವಿರುದ್ಧ ಯಾವುದೇ ದಂಡ ಪಾವತಿ ಕಡ್ಡಾಯಗೊಳಿಸಲು ನ್ಯಾಯಾಲಯ ನಿರಾಕರಿಸಿದೆ.
ಲಲಿತ್ ಮೋದಿ ಅವರು 2005 ರಿಂದ 2010ರ ವರೆಗೆ ಬಿಸಿಸಿಐ ಉಪಾಧ್ಯಕ್ಷರಾಗಿದ್ದರು ಮತ್ತು 2007 ರಿಂದ 2010ರ ವರೆಗೆ ಐಪಿಎಲ್ ಅಧ್ಯಕ್ಷರಾಗಿದ್ದರು. ಅವರು ಸಲ್ಲಿಸಿದ ಅರ್ಜಿಯಲ್ಲಿ, ಬಿಸಿಸಿಐ ಅಧಿಕಾರಿಗಳ ವಿರುದ್ಧದ ದಂಡ ಅಥವಾ ಖರ್ಚುಗಳನ್ನು ಸಂಸ್ಥೆಯೇ ಭರಿಸಬೇಕು ಎಂಬ ನಿಯಮ ಉಲ್ಲೇಖಿಸಿದ್ದರು. ಜೊತೆಗೆ ಹಿಂದಿನ ಅಧಿಕಾರಿಗಳಾದ ಎನ್. ಶ್ರೀನಿವಾಸನ್ ಮತ್ತು ಎಂ.ಪಿ. ಪಾಂಡೋವ್‌ಗಳಿಗೆ ಬಿಸಿಸಿಐ ದಂಡ ಭರಿಸಿದ್ದ ಉದಾಹರಣೆ ನೀಡಿದ್ದರು.
ಆದರೆ, ಸುಪ್ರೀಂ ಕೋರ್ಟ್ ಈ ವಾದವನ್ನು ತಳ್ಳಿಹಾಕಿ, 2005ರಲ್ಲಿ ನೀಡಿದ ತೀರ್ಪಿಗೆ ಸರಿಹೊಂದುವಂತೆ, ಬಿಸಿಸಿಐ ಸರಕಾರೀ ಸಂಸ್ಥೆಯಲ್ಲ ಎಂದು ಸ್ಪಷ್ಟಪಡಿಸಿತು. ಆದ್ದರಿಂದ, ಈ ರೀತಿಯ ದಂಡ ಪಾವತಿಗೆ ಬಿಸಿಸಿಐಗೆ ಕಾನೂನುಬದ್ಧ ಬಾಧ್ಯತೆ ಇಲ್ಲ ಎಂದು ಹೇಳಿತು.
ಈ ಮೊದಲು, 2023ರ ಡಿಸೆಂಬರ್ 19 ರಂದು ಬಾಂಬೆ ಹೈಕೋರ್ಟ್ ಲಲಿತ್ ಮೋದಿ ಅರ್ಜಿಯನ್ನು “ತಪ್ಪು ಕಲ್ಪನೆ” ಎಂದು ಹೇಳಿ ತಿರಸ್ಕರಿಸಿತ್ತು ಮತ್ತು ಟಾಟಾ ಮೆಮೋರಿಯಲ್ ಆಸ್ಪತ್ರೆಗೆ 1 ಲಕ್ಷ ದಂಡ ಪಾವತಿಸುವಂತೆ ನಿರ್ದೇಶನ ನೀಡಿತ್ತು.