ಕರ್ನಲ್ ಖುರೇಷಿ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಜಯ್ ಶಾ ವಿರುದ್ಧ ಎಸ್‌ಐಟಿ ತನಿಖೆಗೆ ಸುಪ್ರೀಂ ಕೋರ್ಟ್ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಪರೇಷನ್‌ ಸಿಂದೂರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರ ಕ್ಷಮೆಯಾಚನೆಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಜೊತೆಗೆ ವಿಜಯ್ ಶಾ ವಿರುದ್ಧ ವಿಶೇಷ ತನಿಖಾ ತಂಡ (SIT) ತನಿಖೆ ನಡೆಸಲಿ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿದ್ದ ಏಕ ಸದಸ್ಯ ಪೀಠ ತಿಳಿಸಿದೆ.

ಪ್ರಕರಣವನ್ನು ತನಿಖೆ ಮಾಡಲು ಮಂಗಳವಾರ ಬೆಳಗ್ಗೆ ಮೂವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು. ಅದು ಮಹಿಳಾ ಅಧಿಕಾರಿಯನ್ನು ಹೊಂದಿರಬೇಕು ಮತ್ತು ಮೇ 28 ರೊಳಗೆ ವರದಿಯನ್ನು ಸಲ್ಲಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ ಈ ತಂಡದಲ್ಲಿರುವವರು ಎಸ್​ಪಿ ಅಥವಾ ಅದಕ್ಕಿಂತ ಉನ್ನತ ಶ್ರೇಣಿಯವರಾಗಿರಬೇಕು, ಅಧಿಕಾರಿಗಳು ಮಧ್ಯಪ್ರದೇಶ ಮೂಲದವರಾಗಿರಬಾರದು, ಆರೋಪಿ ವಿಜಯ್ ಶಾ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಬೇಕು. ತನಿಖೆ ಪೂರ್ಣವಾಗುವವರೆಗೂ ಆರೋಪಿಯನ್ನು ಬಂಧಿಸಬಾರದು. ಎಸ್​ಐಟಿ ತನಿಖೆಯ ವರದಿಯನ್ನು ಸುಪ್ರೀಂಕೋರ್ಟ್​ಗೆ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.

ಕಳೆದ ವಾರ ಆಪರೇಷನ್ ಸಿಂಧೂರ ಕುರಿತು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಸಚಿವ ವಿಜಯ್​ ಶಾ ಅವಹೇಳನಕಾರಿ ಹೇಳಿಕೆ ನೀಡಿದ್ದರು.

ಇಂದು ವಿಚಾರಣೆ ವೇಳೆ ನ್ಯಾಯಾಲಯ, ನೀವು ಯಾವ ರೀತಿ ಕ್ಷಮೆಯಾಚಿಸಿದ್ದೀರಿ? ಕ್ಷಮೆಯಾಚನೆಗೆ ಸ್ವಲ್ಪ ಅರ್ಥವಿದೆ. ಕೆಲವೊಮ್ಮೆ ಜನರು ವಿಚಾರಣೆಯಿಂದ ಹೊರಬರಲು ಮಾತ್ರ ಸೌಮ್ಯ ಭಾಷೆ ಬಳಸುತ್ತಾರೆ. ಅಲ್ಲದೇ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ನಿಮ್ಮದು ಯಾವ ರೀತಿಯ ಕ್ಷಮೆಯಾಚನೆ? ನ್ಯಾಯಾಲಯ ಹೇಳಿದೆ ಎಂಬ ಕಾರಣಕ್ಕೆ ಕ್ಷಮೆ ಕೇಳಿದ್ದೀರಿ, ಇಲ್ಲಿಯವರೆಗೆ ನಿಮ್ಮ ಅಸಭ್ಯ ಹೇಳಿಕೆಗಳಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸಲು ನಿಮ್ಮನ್ನು ಏನು ತಡೆದಿತ್ತು ಎಂದು ಪೀಠ ಛೀಮಾರಿ ಹಾಕಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!