ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರಾಧನಾ ಸ್ಥಳಗಳ ಕಾಯ್ದೆ-1991ರ ಸಿಂಧುತ್ವವನ್ನು ಪ್ರಶ್ನಿಸಿ ಹೊಸದಾಗಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ್ದು, ಬದಲಿಗೆ, ಈಗಾಗಲೇ ವಿಚಾರಣೆಯಲ್ಲಿರುವ ಸಂಬಂಧಿತ ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ಅರ್ಜಿದಾರರಿಗೆ ಅವಕಾಶ ನೀಡಿದೆ.
ಮುಖ್ಯ ನ್ಯಾ.ಸಂಜೀವ್ ಖನ್ನಾ, ನ್ಯಾ. ಪಿ.ವಿ.ಸಂಜಯ್ ಕುಮಾರ್ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು, ಈಗಾಗಲೇ ಆರಾಧನಾ ಸ್ಥಳಗಳ ಕಾಯ್ದೆಗೆ ಸಂಬಂಧಿಸಿದಂತೆ ಹಲವು ಅರ್ಜಿಗಳನ್ನು ಒಟ್ಟಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ.
ಹೊಸದಾಗಿ ಸಲ್ಲಿಸಲಾದ ಅರ್ಜಿಯು ಈಗಾಗಲೇ ವಿಚಾರಣೆಯಲ್ಲಿರುವ ಅರ್ಜಿಗಳಿಗಿಂತ ಭಿನ್ನವಾಗಿಲ್ಲ ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಈ ಸಂಬಂಧ 2024ರ ಡಿ.12ರಂದು ದೇಶದ ಎಲ್ಲಾ ನ್ಯಾಯಾಲಯಗಳಿಗೆ, ಈ ಕಾಯ್ದೆಗೆ ಸಂಬಂಧಿಸಿದ ಹೊಸ ಅರ್ಜಿಗಳನ್ನು ಸ್ವೀಕರಿಸದಂತೆ ಮತ್ತು ಯಾವುದೇ ಸಮೀಕ್ಷೆಗಳಿಗೆ ಆದೇಶ ನೀಡದಂತೆ ಸೂಚನೆ ನೀಡಿದೆ.
ಆರಾಧನಾ ಸ್ಥಳಗಳ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಕೃಷ್ಣ ಕುಮಾರ್ ಉಪಾಧ್ಯಾಯ ಎಂಬುವವರು ಮೂಲ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಅರ್ಜಿಗೆ ಸಂಬಂಧಿಸಿದಂತೆ ಪರ ಮತ್ತು ವಿರೋಧದ ಹಲವು ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿದ್ದು, ಇವೆಲ್ಲವನ್ನೂ ಸುಪ್ರೀಂ ಕೋರ್ಟ್ ಒಟ್ಟಿಗೆ ವಿಚಾರಣೆ ನಡೆಸುತ್ತಿದೆ.
ಏನಿದು 1991ರ ಪೂಜಾ ಸ್ಥಳಗಳ ಕಾಯ್ದೆ?
‘1991ರ ಪೂಜಾ ಸ್ಥಳಗಳ ಕಾಯ್ದೆ’ ಪ್ರಕಾರ ದೇಶದ ಯಾವುದೇ ಧಾರ್ಮಿಕ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿ ಇರುವ ಯಾವುದೇ ಧರ್ಮದ ಆಚರಣೆಯ ‘ಧಾರ್ಮಿಕ ಸ್ವರೂಪ’ವನ್ನು ಬದಲಿಸುವಂತಿಲ್ಲ. ದೇಶದ ಸ್ವಾತಂತ್ರ್ಯ ಬಂದ ದಿನ ಅಂದರೆ 1947ರ ಆಗಸ್ಟ್ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಈ ರೀತಿ ನಿಯಮ ರೂಪಿಸಿ ಕೇಂದ್ರ ಸರ್ಕಾರವು ಜುಲೈ 11, 1991ರಂದು ಕಾಯ್ದೆ ರೂಪಿಸಿ ಜಾರಿಗೆ ತಂದಿತ್ತು.
‘1991ರ ಪೂಜಾ ಸ್ಥಳಗಳ ಕಾಯ್ದೆ’ಯ 3ನೇ ವಿಧಿಯ ಪ್ರಕಾರ, ಯಾವುದೇ ಧಾರ್ಮಿಕ ಸ್ಥಳದ ಯಾವುದೇ ಧಾರ್ಮಿಕ ವಿಧಿ ವಿಧಾನವನ್ನೂ ಬದಲಿಸುವಂತಿಲ್ಲ. ಪೂಜಾ ವಿಧಿ ವಿಧಾನವನ್ನು ಮಾರ್ಪಡಿಸುವಂತಿಲ್ಲ. ಅದೇ ಧರ್ಮದ ಬೇರೆ ಪಂಗಡದ ವಿಧಿ ವಿಧಾನವನ್ನೂ ಆಚರಿಸುವಂತಿಲ್ಲ.ಆದರೆ, ಯಾವುದೇ ಧಾರ್ಮಿಕ ಸ್ಥಳವು ಪ್ರಾಚೀನವಾಗಿದ್ದರೆ, ಐತಿಹಾಸಿಕ ಸ್ಮಾರಕವಾಗಿದ್ದರೆ, ಪ್ರಾಚ್ಯವಸ್ತು, ಪುರಾತತ್ವ ಇಲಾಖಾ ವ್ಯಾಪ್ತಿಗೆ ಒಳಪಡುವ ಪ್ರದೇಶವಾದರೆ, ಅದು ಈ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ.