ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದ 6 ಮಂದಿ ಕಾಂಗ್ರೆಸ್ ಶಾಸಕರನ್ನು ಅನರ್ಹಗೊಳಿಸಿ ವಿಧಾನಸಭಾಧ್ಯಕ್ಷರು ನೀಡಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠವು, ಈ ಕುರಿತಂತೆ 4 ವಾರಗಳಲ್ಲಿ ಪ್ರತಿಕ್ರಿಯೆ ಕೇಳಿ ಸ್ಪೀಕರ್ ಕುಲದೀಪ್ ಸಿಂಗ್ ಪಠಾನಿಯಾ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಜೊತೆಗೆ ಪ್ರಕರಣದ ವಿಚಾರಣೆಯು ನ್ಯಾಯಾಲಯದಲ್ಲಿ ಬಾಕಿ ಇರುವಾಗ, ಅನರ್ಹ ಶಾಸಕರು ವಿಧಾನಸಭೆಯ ಕಾರ್ಯ ಕಲಾಪದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
6 ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಹೊರಡಿಸಿರುವ ಅಧಿಸೂಚನೆಗೆ ತಡೆ ನೀಡಬೇಕೆ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದು ಪೀಠ ಹೇಳಿದ್ದು, ಪ್ರಕರಣದ ವಿಚಾರಣೆಯನ್ನು ಮೇ 6ಕ್ಕೆ ಮುಂದೂಡಿದೆ.
ಬಜೆಟ್ ಅನುಮೋದನೆ ವೇಳೆ ಸದನದಲ್ಲಿ ಹಾಜರಿದ್ದು, ಸರ್ಕಾರದ ಪರ ಮತ ಚಲಾಯಿಸುವಂತೆ ನೀಡಿದ್ದ ವಿಪ್ ಉಲ್ಲಂಘಿಸಿದ್ದ ಶಾಸಕರಾದ ಸುಧೀರ್ ಶರ್ಮಾ, ರವಿ ಠಾಕೂರ್, ರಾಜೀಂದರ್ ರಾಣಾ, ಇಂದೇರ್ ದತ್ ಲಖನ್‌ಪಾಲ್, ಚೈತನ್ಯ ಶರ್ಮಾ ಮತ್ತು ದೇವಿಂದರ್ ಕುಮಾರ್ ಭುಟ್ಟೋ ಅವರನ್ನು ಫೆಬ್ರುವರಿ 29ರಂದು ಅನರ್ಹಗೊಳಿಸಿ ವಿಧಾನಸಭಾ ಅಧ್ಯಕ್ಷರು ಆದೇಶಿಸಿದ್ದರು.6 ಶಾಸಕರ ಅನರ್ಹತೆ ಬಳಿಕ ಸದನದ ಬಲ 68ರಿಂದ 62ಕ್ಕೆ ಇಳಿದಿದ್ದು, ಕಾಂಗ್ರೆಸ್ ಶಾಸಕರ ಬಲ 40ರಿಮದ 34ಕ್ಕೆ ಬಂದಿದೆ.