ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ಅವರ ಪ್ರತಿಮೆಯನ್ನು ಸ್ಥಾಪಿಸುವ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಸರ್ಕಾರಕ್ಕೆ ಕ್ಲಾಸ್
ತೆಗೆದುಗೊಂಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಇಬ್ಬರು ನ್ಯಾಯಾಧೀಶರ ಪೀಠವು, ಇದಕ್ಕೆ ಅವಕಾಶವಿಲ್ಲ. ಹಿಂದಿನ ನಾಯಕರನ್ನು ವೈಭವೀಕರಿಸಲು ನೀವು ಸಾರ್ವಜನಿಕ ಹಣವನ್ನು ಏಕೆ ಬಳಸುತ್ತಿದ್ದೀರಿ? ಎಂದು ಟೀಕಿಸಿದೆ.
ರಾಜ್ಯ ಸರ್ಕಾರ ತನ್ನ ಅರ್ಜಿಯನ್ನು ಹಿಂಪಡೆದು ಸೂಕ್ತ ಪರಿಹಾರಕ್ಕಾಗಿ ಮದ್ರಾಸ್ ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಪೀಠವು ಸೂಚಿಸಿತು.
ತಿರುನಲ್ವೇಲಿ ಜಿಲ್ಲೆಯ ಮುಖ್ಯ ರಸ್ತೆಯಲ್ಲಿರುವ ವಲ್ಲಿಯೂರ್ ತರಕಾರಿ ಮಾರುಕಟ್ಟೆಯ ಸಾರ್ವಜನಿಕ ಕಮಾನು ಪ್ರವೇಶದ್ವಾರದ ಬಳಿ ಕರುಣಾನಿಧಿ ಅವರ ಕಂಚಿನ ಪ್ರತಿಮೆ ಮತ್ತು ನಾಮಫಲಕವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಅನುಮತಿ ಕೋರಿತ್ತು.
ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪನೆಗೆ ಅನುಮತಿ ನಿರಾಕರಿಸಿದ ಮದ್ರಾಸ್ ಹೈಕೋರ್ಟ್‌ನ ಹಿಂದಿನ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಅರ್ಜಿಯನ್ನು ವಜಾಗೊಳಿಸಿತು. ಇಂತಹ ಸ್ಥಾಪನೆಗಳು ಹೆಚ್ಚಾಗಿ ಸಂಚಾರ ದಟ್ಟಣೆಯನ್ನು ಉಂಟುಮಾಡುತ್ತವೆ ಮತ್ತು ಸಾರ್ವಜನಿಕರಿಗೆ ಅನಾನುಕೂಲತೆಯನ್ನುಂಟುಮಾಡುತ್ತವೆ ಎಂದು ಹೈಕೋರ್ಟ್ ಗಮನಿಸಿತ್ತು.
ಸಂವಿಧಾನದ ಅಡಿಯಲ್ಲಿ ನಾಗರಿಕರ ಹಕ್ಕುಗಳನ್ನು ರಕ್ಷಿಸಬೇಕು. ಸುಪ್ರೀಂ ಕೋರ್ಟ್ ಅಂತಹ ಅನುಮತಿಗಳನ್ನು ನಿರ್ಬಂಧಿಸಿದಾಗ, ರಾಜ್ಯವು ಅವುಗಳನ್ನು ನೀಡಲು ಆದೇಶಗಳನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.