ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಅಡಿಯಲ್ಲಿ ಫ್ಯಾಕ್ಟ್ ಚೆಕ್ ಯುನಿಟ್‌ಅನ್ನು (ಎಫ್‌ಸಿಯು) ಆರಂಭ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಾರ್ಚ್ 20 ರಂದು ಪ್ರಕಟಿಸಿದ ಅಧಿಸೂಚನೆಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.
(ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್) ತಿದ್ದುಪಡಿ ನಿಯಮಗಳು 2023ಗೆ ಮಾಡಿರುವ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಬ್ಯಾಚ್‌ಅನ್ನು ಬಾಂಬೆ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ವಿಚಾರದಲ್ಲಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವವರೆಗೆ ಅಧಿಸೂಚನೆಯನ್ನು ತಡೆಹಿಡಿಯಲಾಗುವುದು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರ ನೇತೃತ್ವದ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಐಟಿ ನಿಯಮಗಳ ಸಿಂಧುತ್ವವನ್ನು ಪ್ರಶ್ನಿಸುವ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಲಾದ ಅರ್ಜಿಗಳು ಕೆಲವು ಗಂಭೀರವಾದ ಸಾಂವಿಧಾನಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಮತ್ತು ವಾಕ್ ಸ್ವಾತಂತ್ರ್ಯದ ಮೇಲೆ ಅದರ ಪ್ರಭಾವವನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಗಮನಿಸಿದರು.
ಹೈಕೋರ್ಟ್‌ನಲ್ಲಿ ಇದು ಸಂವಿಧಾನದ 19(1)(a) ಅಲ್ಲಿನ ಪ್ರಮುಖ ಪ್ರಶ್ನೆಯೊಂದಿಗೆ ವ್ಯವಹಾರ ಮಾಡುತ್ತದೆ ಎಂದು ನಾವು ಪರಿಗಣಿಸುತ್ತೇವೆ. ಹೈಕೋರ್ಟ್‌ನ ತೀರ್ಪು ಈ ವಿಚಾರದಲ್ಲಿ ಬಾಕಿ ಇದೆ. ಮಧ್ಯಂತರ ಪರಿಹಾರದ ಅರ್ಜಿಯನ್ನು ತಿರಸ್ಕರಿಸಿದ ನಂತರ ಮಾರ್ಚ್ 20ರಂದು ನೀಡಲಾಗಿರುವ ಅಧಿಸೂಚನೆಯನ್ನು ತಡೆಹಿಡಿಯಬೇಕಾಗಿದೆ ಎಂದು ಸಿಜೆಐ ಡಿವೈ ಚಂದ್ರಚೂಡ್ ಹೇಳಿದ್ದಾರೆ.
ಇದೇ ವೇಳೆ ಬಾಂಬೆ ಹೈಕೋರ್ಟ್‌ನ ಮಾರ್ಚ್ 11 ರ ಆದೇಶವನ್ನು ಪೀಠವು ರದ್ದುಗೊಳಿಸಿತು, ಇದರಲ್ಲಿ ನ್ಯಾಯಾಲಯವು ತಿದ್ದುಪಡಿ ಮಾಡಿದ ಐಟಿ ನಿಯಮಗಳ ಅಡಿಯಲ್ಲಿ ಸತ್ಯ-ಪರಿಶೀಲನಾ ಘಟಕಗಳನ್ನು ರಚಿಸುವ ಮಧ್ಯಂತರ ತಡೆಯನ್ನು ನಿರಾಕರಿಸಿತ್ತು. ಸಿಜೆಐ ನೇತೃತ್ವದ ಪೀಠವು ಸತ್ಯ ಪರಿಶೀಲನಾ ಘಟಕ ಸ್ಥಾಪನೆಗೆ ಕೇಂದ್ರದ ಅಧಿಸೂಚನೆಗೆ ಮಧ್ಯಂತರ ತಡೆಯಾಜ್ಞೆ ಕೋರಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಅಡಿಯಲ್ಲಿ ಬುಧವಾರ ಅಧಿಸೂಚನೆಯನ್ನು ನೀಡಲಾಗಿತ್ತು. ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಅಡಿಯಲ್ಲಿ ಬರಲಿರುವ ಈ ಎಫ್‌ಸಿಯುಗಳು, ಕೇಂದ್ರ ಸರ್ಕಾರ ಹಾಗೂ ಅದರ ಏಜೆನ್ಸಿಗಳಿಗೆ ಸಂಬಂಧಪಟ್ಟ ವಿಚಾರದಲ್ಲಿ ಸುಳ್ಳಿ ಹಾಗೂ ನಕಲಿ ಮಾಹಿತಿ ಪ್ರಸಾರವಾದಲ್ಲಿ ಇದನ್ನು ಸುಳ್ಳು ಎಂದು ಅಧಿಕೃತವಾಗಿ ಹೇಳುವ ಅಧಿಕಾರವನ್ನು ಹೊಂದಿರುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.