ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ಸೂರತ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ವಿಧಿಸಿರುವ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ ಗುಜರಾತ್ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಮೇಲ್ಮನವಿಯ ಅರ್ಜಿ ವಿಚಾರಣೆಯನ್ನು ಇಂದು ಸುಪ್ರೀಂ ಕೋರ್ಟ್ ಕೈಗೆತ್ತುಕೊಂಡಿತು.
ಅರ್ಜಿ ವಿಚಾರಣೆ ವೇಳೆ ರಾಹುಲ್ ಗಾಂಧಿಯವರ ಮನವಿಯ ಮೇರೆಗೆ ದೂರುದಾರ ಮತ್ತು ಗುಜರಾತ್ ಬಿಜೆಪಿ ಶಾಸಕ ಪೂರ್ಣೇಶ್ ಮೋದಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಈ ಕುರಿತು ವಿಚಾರಣೆಯನ್ನು ಆಗಸ್ಟ್ 4ಕ್ಕೆ ಮುಂದೂಡಿದೆ.
2019ರಲ್ಲಿ ಮೋದಿ ಉಪನಾಮ ಕುರಿತಾದ ವಿವಾದಾತ್ಮಕ ಹೇಳಿಕೆ ವಿರುದ್ಧದ ಮಾನಹಾನಿ ಪ್ರಕರಣದಲ್ಲಿ ತಮಗೆ ವಿಧಿಸಿರುವ ಶಿಕ್ಷೆಗೆ ತಡೆ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾಗೊಳಿಸಿತ್ತು. ಅದರಿಂದಾಗಿ ಅವರು ಲೋಕಸಭಾ ಸಂಸದ ಸ್ಥಾನದಿಂದಲೂ ಅನರ್ಹರಾದರು, ಈ ವಿಚಾರವಾಗಿ ರಾಹುಲ್ ಗಾಂಧಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.