ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಇತಿಹಾಸ ನಿರ್ಮಿಸಿದೆ. ಭಾರತದ ಮೃಗಾಲಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರಾಣಿಗಳ ವಿನಿಮಯ (Animal Exchange) ಕಾರ್ಯಕ್ರಮ ನಡೆಯುತ್ತಿದೆ. ಈ ವಿನಿಮಯದಲ್ಲಿ ಜಪಾನ್‌ನ ಹಿಮೇಜಿ ಸೆಂಟ್ರಲ್ ಪಾರ್ಕ್ ಜೊತೆ ಪ್ರಾಣಿಗಳ ಪರಸ್ಪರ ವಿನಿಮಯ ಮಾಡಿಕೊಳ್ಳಲಾಗುತ್ತಿದ್ದು, ಇದರ ಹಿಂದೆ ಕೇಂದ್ರ ಮೃಗಾಲಯ ಪ್ರಾಧಿಕಾರದ ವಿಶೇಷ ನಿರ್ಧಾರ ಮತ್ತು ತೀವ್ರ ಪರಿಶ್ರಮ ಇದೆ.
ಬನ್ನೇರುಘಟ್ಟ ಉದ್ಯಾನವನದಿಂದ ಜಪಾನ್‌ಗೆ ಒಟ್ಟು ನಾಲ್ಕು ಆನೆಗಳನ್ನ ಕಳುಹಿಸಲಾಗುತ್ತಿದೆ. 8 ವರ್ಷದ ಗಂಡು ಆನೆ ಸುರೇಶ್, ಮತ್ತು 9, 7 ಹಾಗೂ 5 ವರ್ಷದ ಹೆಣ್ಣು ಆನೆಗಳು ಗೌರಿ, ಶ್ರುತಿ ಮತ್ತು ತುಳಸಿಯನ್ನು ವಿಮಾನದ ಮೂಲಕ ಜಪಾನ್‌ನ ಒಸಾಕಾ ಕಾನ್ಸೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರವಾನೆ ಮಾಡಲಾಗುತ್ತಿದೆ. ಕತಾರ್ ಏರ್‌ವೇಸ್‌ನ B777-200F ಸರಕು ವಿಮಾನದ ಮೂಲಕ ಸುಮಾರು 20 ಗಂಟೆಗಳ ಪ್ರಯಾಣಕ್ಕೆ ಈ ಆನೆಗಳು ಸಿದ್ಧವಾಗಿವೆ. ವಿಮಾನ ಪ್ರಯಾಣಕ್ಕಾಗಿ ಆನೆಗಳಿಗೆ ಈಗಾಗಲೇ ವಿಶೇಷ ತರಬೇತಿ ನೀಡಲಾಗಿದ್ದು, ಅವುಗಳ ಭದ್ರತೆಗೆ ವೈದ್ಯರು, ಪಶುಪಾಲಕರು, ಮೇಲ್ವಿಚಾರಕರು ಮತ್ತು ಜೀವಶಾಸ್ತ್ರಜ್ಞರು ಪ್ರಯಾಣಿಸಲಿದ್ದಾರೆ.
ಈ ಆನೆಗಳ ಬದಲಾಯಿಯಾಗಿ ಜಪಾನ್‌ನಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ 4 ಚೀತಾ, 4 ಜಾಗ್ವಾರ್, 4 ಪೂಮಾ, 3 ಚಿಂಪಾಂಜಿ ಹಾಗೂ 8 ಕ್ಯಾಪುಚಿನ್ ಕೋತಿಗಳು ತರಲಾಗುತ್ತಿವೆ. ಇವು ಬನ್ನೇರುಘಟ್ಟ ಉದ್ಯಾನವನಕ್ಕೆ ಹೊಸ ಜೀವಂತ ಆಕರ್ಷಣೆಗಳು ಆಗಲಿವೆ. ಹಿಮೇಜಿ ಪಾರ್ಕ್‌ನಲ್ಲಿ ಆನೆಗಳಿಗೆ 2 ವಾರಗಳ ಕಾಲ ಪರಿಸರಕ್ಕೆ ಹೊಂದಿಕೊಳ್ಳಲು ವಿಶೇಷ ತರಬೇತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿನಿಮಯ ಯೋಜನೆಯು ಭಾರತ-ಜಪಾನ್ ನಡುವಿನ ವೈಜ್ಞಾನಿಕ ಸಹಕಾರ ಮತ್ತು ಪ್ರಾಣಿ ಸಂರಕ್ಷಣಾ ಕಾಳಜಿಯ ಪ್ರತೀಕವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಂತಾರಾಷ್ಟ್ರೀಯ ಪ್ರಾಣಿಗಳ ವಿನಿಮಯಕ್ಕೆ ದಾರಿಯಾಗುವ ನಿರೀಕ್ಷೆಯಿದೆ.