ಹೊಸ ದಿಗಂತ ಡಿಜಿಟಲ್ ಡೆಸ್ಕ್:
25 ಜೂನ್, ರಾಷ್ಟ್ರೀಯ ಶಸ್ತ್ರಚಿಕಿತ್ಸರ ದಿನಾಚರಣೆ (National day). ಇದು ಶಸ್ತ್ರಚಿಕಿತ್ಸಕರು ಸಂಭ್ರಮಿಸುವ ದಿನವಾದರೂ ಸಾರ್ವಜನಿಕರಿಗೆ ಕೆಲವೊಂದು ವಿಶಿಷ್ಠವಾದ ವಿಷಯಗಳು ತಿಳಿಸಬೇಕಾಗಿದೆ . ಯಾರು ಶಸ್ತ್ರಗಳನ್ನ ಉಪಯೋಗಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾರೋ ಅವರೆಲ್ಲ ಶಸ್ತ್ರಚಿಕಿತ್ಸಕರೆಂದು ಕರೆಸಿಕೊಳ್ತಾರೆ. ಸುಶ್ರುತರು ದೇಶದ ಮೊದಲ ಸರ್ಜನ್, 800 BC ಯಲ್ಲಿ ಅವರು ಬರೆದಿರುವ ಸುಶ್ರುತ ಸಂಹಿತೆ ಇಂದಿಗೂ ಉಪಯುಕ್ತ.
ಸರ್ಜನ್ ಗಳೆಂದರೆ ಸಾಮಾನ್ಯ ಶಸ್ತ್ರಚಿಕಿತ್ಸಕರು, ಹೆರಿಗೆ ತಜ್ಞರು, ಮೂಳೆ ತಜ್ಞರು, ಕಿವಿ ಮೂಗು ಗಂಟಲು ತಜ್ಞರು,ಕಣ್ಣಿನ ಸರ್ಜನ್, ಕ್ಯಾನ್ಸರ್ ಸರ್ಜನ್, ಕಿಡ್ನಿ ಹಾಗೂ ಮೂತ್ರ ರೋಗದ ಸರ್ಜನ್, ನರ ರೋಗದ ಸರ್ಜನ್, ಹೃದಯ ಸರ್ಜನ್, ಜಠರ ಹಾಗೂ ಕರಳಿನ ಸರ್ಜನ್,ಡೆಂಟಲ್ ಸರ್ಜನ್ ಹೀಗೆ ನಾನಾ ಸೂಪರ್ ಸ್ಪೆಷಾಲಿಟಿ ಸರ್ಜನ್ ಗಳೆಲ್ಲ ಪಟ್ಟಿಯಲ್ಲಿ ಬರುತ್ತಾರೆ. ಈ ಎಲ್ಲಾ ಸರ್ಜನ್ ಗಳಗೂ ಅರವಳಿಕೆ ತಜ್ಞರ ಸಹಾಯ ಹಾಗೂ ಸಹಕಾರ ಬಹಳ ಮುಖ್ಯ. ನಾವು ಎಂತಹ ಶಸ್ತ್ರಚಿಕಿತ್ಸೆ ಮಾಡಿ ಹೆಸರು ಮಾಡಿದರೂ ಅದರ ಹಿಂದೆ ಅರಿವಳಿಕೆ ತಜ್ಞರು ಬೆನ್ನೆಲುಬಾಗಿ ಇದ್ದೇ ಇರ್ತಾರೆ.ಹಾಗೇಯೇ, ಶಸ್ತ್ರಚಿಕಿತ್ಸರು ರೋಗಿಗಳಿಗೆ ಆಪರೇಶನ್ ಮಾಡುವ ಮೊದಲು ಇನ್ನಿತರ ಸ್ಪೆಶಲಿಸ್ಟ್ ಹಾಗೂ ಸೂಪರ್ ಸ್ಪೆಷಲಿಸ್ಟ್ಗಳ ಸಹಕಾರ ಬಹಳ ಮುಖ್ಯ. ಫಿಸಿಷಿಯನ್, ಹೃದಯ ತಜ್ಞರು, ಮಕ್ಕಳ ತಜ್ಞರು ಹಾಗೂ ಇನ್ನಿತರರ ಸಹಾಯ ಬೇಕಾಗುತ್ತದೆ.ಶಸ್ತ್ರಚಿಕಿತ್ಸೆಗೆ ತಯಾರು ಮಾಡಲು ಇವರೆಲ್ಲರ ಸಹಕಾರ ಬಹಳ ಮುಖ್ಯ.
ಮೊದಲೆಲ್ಲ CT ಸ್ಕ್ಯಾನ್ , ಹೊಟ್ಟೆ ಸ್ಕ್ಯಾನಿಂಗ್, ರಕ್ತ ನಾಳಗಳ ಸ್ಕ್ಯಾನಿಂಗ್, PET ಸ್ಕ್ಯಾನಿಂಗ್ ಇನ್ನಿತರ ಅತ್ಯಾಧುನಿಕ ಉಪಕರಣಗಳು ಇರದಿದ್ದ ಕಾಲದಲ್ಲಿ ಶಸ್ತ್ರಚಿಕಿತ್ಸಕರಿಗೆ ಬಹಳ ಕಠಿಣವಾದ ದಿನಗಳಿದ್ದವು, ಡಯಾಗ್ನೊಸಿಸ್ ಒಂದಾಗಿದ್ದರೆ ಒಳಗಡೆ ಖಾಯಿಲೆ ಇನ್ನೊಂದು ಆಗಿರ್ತತ್ತು. Chest is a music box and Abdomen is a magic box ಅನ್ನುವ ಮಾತಿತ್ತು. ಇತ್ತೀಚಿನ ದಿನಗಳಲ್ಲಿ ಆಧುನಿಕ ಉಪಕರಣಗಳು ಬಂದ ಮೇಲೆ ರೋಗಿಗಳಿಗೆ ಸರಿಯಾದ ಡಯಾಗ್ನೊಸಿಸ್ ಹಾಗೂ ಚಿಕಿತ್ಸೆ ಕೊಡಲು ಸಾದ್ಯವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಕೆಲವೊಮ್ಮೆ ಕ್ಲಿಷ್ಟಕರವಾದ ಸಮಯದಲ್ಲಿ ಸರ್ಜನ್ ಗಳು ಹೆಣಗಾಡಬೇಕಾಗುತ್ತೆ.
ಎಷ್ಟೇ ಅನುಭವ ಇರುವ ಸರ್ಜನ್ ಆಗಿದ್ದರೂ ಪ್ರತೀ ರೋಗಿಗೂ ಅವನು ಅಷ್ಟೇ ಕಾಳಜಿ ಕೊಡಬೇಕಾಗುತ್ತೆ. ಪ್ರತೀ ರೋಗಿಯಲ್ಲೂ ಏನಾದರೂ ಹೊಸ ಅನುಭವ ಆಗುತ್ತಲೇ ಇರುತ್ತದೆ. ನಾನು ಸಾವಿರಾರು ಆಪರೇಷನ್ ಗಳನ್ನ ಮಾಡಿದ್ದೇನೆಂದು ಅಹಂಕಾರ ಪಡುವ ಹಾಗಿಲ್ಲ ಹಾಗೂ ಪ್ರತೀ ಆಪರೇಷನ್ ಪ್ರಾರಂಬಿಸುವಾಗ ಸರ್ಜನ್ ಗಳ ಹೃದಯ ಬಡಿತ ಹೆಚ್ಚಾಗುತ್ತೆ ಆಮೇಲೆ ಸರಿಯಾಗುತ್ತೆ. ಏಕೆಂದರೆ ನಾವು ಕೆಲಸ ಮಾಡುತ್ತಿರುವ ವ್ಯಕ್ತಿಯ ಜೀವ ಬಹು ಮುಖ್ಯ. ಕೆಲವೊಮ್ಮೆ ಅನಿರೀಕ್ಷಿತ ಘಟನೆಗಳು ಸಂಭವಿಸುವ ಭಯ ನಮ್ಮೊಳಗೆ ಇದ್ದೇ ಇರುತ್ತೆ .ಆಪರೇಷನ್ ಸಮಯದಲ್ಲಿ ಒಂದೆರಡು ಹನಿ ರೋಗಿಯ ರಕ್ತ ಹೋದರೂ ಸರ್ಜನ್ ದೇಹದಿಂದ ಅಷ್ಟೇ ಬೆವರು ಇಳಿದಿರುತ್ತೆ.
ಶಸ್ತ್ರಚಿಕಿತ್ಸೆ ಅಂದರೆ ಅದಕ್ಕೆ ಬಹಳಷ್ಟು ತಯಾರಿ ಇರಬೇಕು. ಒಳ್ಳೆಯ ಆಪರೇಷನ್ ಕೊಠಡಿ, ಆಧುನಿಕ ಅರಿವಳಿಕೆ ಯಂತ್ರೋಪಕರಣಗಳು , ಎಲ್ಲಾ ತುರ್ತು ಚಿಕಿತ್ಸೆಗೆ ಬೇಕಾದ ಔಷದಗಳು ( ಅನಿರೀಕ್ಷಿತವಾಗಿ ಬರುವ ಅಪಾಯಗಳಿಗೂ ಮುಂಜಾಗ್ರತೆ), ಕೆಲವೊಮ್ಮೆ ರಕ್ತದ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತೆ. ಒಟ್ಟಿನಲ್ಲಿ ರೋಗಿಯ ಜೀವಕ್ಕೆ ಅಪಾಯವಾಗದ ಹಾಗೆ ಮುನ್ನೆಚ್ಚರಿಕೆ ಕ್ರಮಗಳನ್ನು.ರೋಗಿಗೆ ಸೋಂಕು ಆಗದಂತೆ ಮುನ್ನೆಚ್ಚರಿಕೆ ಬಹಳ ಮುಖ್ಯ. ಅದಕ್ಕೆ ಓಟಿ ಸಿಬ್ಬಂದಿಗಳು ಬಹಳಷ್ಟು ಎಚ್ಚರಿಕೆಯಿಂದ ರೋಗಿಗೆ ಸೋಂಕು ಆಗದಂತೆ ಶಿಷ್ಟಾಚಾರವನ್ನು ಪಾಲಿಸಬೇಕಾಗುತ್ತೆ. ಒಂದು ಆಪರೇಷನ್ ಆದಮೇಲೆ ಇನ್ನೊಂದು ಆಪರೇಷನ್ಗೆ ಅಷ್ಟೇ ವೇಗವಾಗಿ ಕೊಠಡಿ ಸಜ್ಜುಗೊಳಿಸಬೇಕು. ಶಸ್ತ್ರಚಿಕಿತ್ಸೆ ಸರ್ಜನ್ ಒಬ್ಬನೇ ಮಾಡಲು ಸಾದ್ಯವಿಲ್ಲ, ಅದಕ್ಕೆ ನುರಿತ ಶುಶ್ರೂಷಕ ಅಥವಾ ಶುಶ್ರೂಷಕಿಯರ ಉಪಸ್ಥಿತಿ ಬಹಳ ಮುಖ್ಯ . ಅವರು ಸರಿಯಾಗಿ ಅಸಿಸ್ಟ್ ಮಾಡಿದ್ದಲ್ಲಿ ಮಾತ್ರ ಸರ್ಜರಿ ಸರಾಗವಾಗಿ ನೆಡೆಯಬಲ್ಲದು. ಆಪರೇಷನ್ ಥಿಯೇಟರ್ ಟೆಕ್ನಿಷಿಯನ್ ಬಹಳ ಕಡೆ ಸಿಗುವುದು ಕಷ್ಟ ,ಅವರಿದ್ದರೆ ಇನ್ನೂ ಸಹಾಯಕ್ಕೆ ಬರ್ತಾರೆ. ಕೊಠಡಿಯ ಸ್ವಚ್ಚತಾ ಕೆಲಸ ಬಹಳ ಮುಖ್ಯ ಅದಕ್ಕೆಲ್ಲಾ ಥಿಯೇಟರ್ ಶಿಷ್ಟಾಚಾರಗಳು ಇರುತ್ತವೆ. ಆಪರೇಷನ್ಗಿಂತ ಮೊದಲು ಆಕ್ಸಿಜನ್ ಹಾಗೂ ಇನ್ನಿತರ ಅನಿಲಗಳ ಪರಿಶಿಲಿಸಬೇಕು. ಒಟ್ಟಾರೆ ಯಾಗಿ ಹೇಳಬೇಕೆಂದರೆ ಆಪರೇಷನ್ ಮಾಡುವ ಮೊದಲು ಬಹಳಷ್ಟು ತಯಾರಿ ಇರಬೇಕು. ಒಮ್ಮೆ ಅಪರೇಷನ್ ಶುರುವಾದರೆ ಕೊಠಡಿಯಲ್ಲಿ ಎಲ್ಲಾ ವ್ಯವಸ್ಥಿತ ವಾಗಿರಬೇಕು. ಏಕೆಂದರೆ ರೋಗಿಯ ಜೀವ ಹಾಗೂ ಜೀವನ ಬಹು ಮುಖ್ಯ.
ಒಬ್ಬ ವ್ಯಕ್ತಿ ತನ್ನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿಕೊಳ್ಳಬೇಕೆಂದರೆ ಅವನಿಗೆ ವೈದ್ಯನ ಮೇಲೆ ಅಪಾರವಾದ ನಂಬಿಕೆ ಇರಬೇಕು ಮತ್ತು ನಂಬಿಕೆ ಇರುತ್ತೆ ಕೂಡ.ರೋಗಿಯು ನಾಲ್ಕಾರು ಜನರಲ್ಲಿ ವಿಚಾರಿಸಿ ಹಾಗೂ ಇತರೆ ವೈದ್ಯ ರ ಸಲಹೆ ಪಡೆದು ಶಸ್ತ್ರಚಿಕಿತ್ಸಕರ ಹತ್ತಿರ ಬರುವುದು ಸಾಮಾನ್ಯ. ಆಗ ಸರ್ಜನ್ ಕೂಡ ತನ್ನೆಲ್ಲಾ ಅನುಭವ ಹಾಗೂ ನಿಪುಣತೆ ಉಪಯೋಗಿಸಿ ಚಿಕಿತ್ಸೆ ಕೊಡಲು ಪ್ರಯತ್ನಿಸುತ್ತಾನೆ.ಒಮ್ಮೊಮ್ಮೆ ಕೆಲವು ಕಣ್ಣಿಗೆ ಕಾಣದ ಅಥವಾ ಅನಿರೀಕ್ಷಿತ ಆಘಾತಕಾರಿ ಘಟನೆಯು ಸಂಭವಿಸಿದಾಗ ವೈದ್ಯರ ಮೇಲೆ ಆರೋಪಿಸೋದು ಸರ್ವೇಸಾಮಾನ್ಯ.ಅವರವರ ಸ್ಪೆಷಾಲಿಟಿ ತಕ್ಕ ಹಾಗೆ ಕೆಲಸದಲ್ಲಿ ಮಾನಸಿಕ ಹಾಗೂ ದೈಹಿಕವಾಗಿ ಒತ್ತಡ ವಿಪರೀತವಾಗಿ ಇರುತ್ತೆ.ಎಷ್ಟೇ ಕಷ್ಟಕರವಾದ ಆಪರೇಷನ್ ಮಾಡಿದ್ರೂ ಒಮ್ಮೆ ರೋಗಿಯು ಗುಣಮುಖವಾದಲ್ಲಿ ಎಲ್ಲಾ ಕಷ್ಟಗಳು ಮರೆತು ಹೋಗುತ್ತೆ.
ನಮ್ಮ ಶಸ್ತ್ರಚಿಕಿತ್ಸೆಯ ವಿಭಾಗದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಅವಿಷ್ಕಾರಗಳಾಗಿದ್ದು ಹಾಗೂ ಇನ್ನೂ ಹೆಚ್ಚಿನ ಅವಿಷ್ಕಾರಗಳಾಗುತ್ತಿದ್ದು ಜನರಿಗೆ ಬಹಳ ಸರಳವಾಗಿ ಚಿಕಿತ್ಸೆ ಸಿಗುತ್ತಿದೆ. ಲ್ಯಾಪರೊಸ್ಕೋಪ್ , ಎಂಡೋಸ್ಕೋಪ್ , ಲೇಸರ್ ಹಾಗೂ ಕಾಟರಿ(ಹಾರ್ಮೋನಿಕ್) ಇನ್ನೂ ಹಲವು ಅತ್ಯಾಧುನಿಕ ಉಪಕರಣಗಳು ಸರ್ಜರಿಯಲ್ಲಿ ಬಹಳ ದೊಡ್ಡ ಅವಿಷ್ಕಾರ.ಒಂದು ಸಣ್ಣ ಪೆನ್ಸಿಲ್ ಗಾತ್ರದ ಉಪಕರಣಗಳನ್ನು ಹೊಟ್ಟೆ,ಕೀಲು,ಬೆನ್ನೆಲುಬು ಹಾಗೂ ಎದೆ ಒಳಗೆ ತೂರಿಸಿ ಟಿವಿ ಪರದೆ ಮೇಲೆ ನೋಡಿಕೊಂಡು ಬಹಳಷ್ಟು ಕ್ಲಿಷ್ಟಕರವಾದ ಆಪರೇಷನ್ಗಳನ್ನ ಬಹಳ ಸುಲಭವಾಗಿ ಮಾಡಬಹುದಾಗಿದೆ. ಇದಕ್ಕೆ ಬಹಳ ತರಬೇತಿ, ನಿಪುಣತೆ, ಜಾಣ್ಮೆ ಹಾಗೂ ತಾಳ್ಮೆ ಬೇಕು.
ಇದೆಲ್ಲದರ ಮದ್ಯ ಸರ್ಜನ್ ಗಳಿಗೆ ವಿಷೇಶವಾದ ಸಮಸ್ಯೆಗಳಿವೆ .ಕೆಲವೊಮ್ಮೆ ಆಪರೇಷನ್ ಶುರುವಾದಾಗ ಅನಿರೀಕ್ಷಿತವಾಗಿ ಸಮಯ ಮಿತಿಮೀರಬಹುದು. ಊಟ ತಿಂಡಿ ಸಮಯಕ್ಕೆ ಸರಿಯಾಗಿ ಮಾಡಲು ಆಗದೆ ಇರಬಹುದು, ಇದರಿಂದ ಆರೋಗ್ಯ ಕೆಡಬಹುದು. ಕೆಲವೊಮ್ಮೆ ರೋಗಿಯಿಂದ ಸರ್ಜನ್ಗೆ ವೈರಸ್ ರೋಗ ಹರಡಬಹುದು( ಬಹಳಷ್ಟು ಉದಾಹರಣೆಗಳಿವೆ).ಸರ್ಜನ್ ಗಳು ಬಹಳಷ್ಟು ಹೊತ್ತು ನಿಲ್ಲಬೇಕಾದ್ದರಿಂದ ಕೆಲವೊಮ್ಮೆ ವೆರಿಕೋಸ್ ಖಾಯಿಲೆಯಿಂದ ಬಳಲಬೇಕಾಗುತ್ತದೆ. ಸರ್ಜನ್ ಗಳಿಗೆ ಬೇರೆ ವೈದ್ಯರ ಹೋಲಿಕೆ ಮಾಡಿದ್ದಲ್ಲಿ ವಿಪರೀತವಾದ ಒತ್ತಡ ಇರುತ್ತದೆ ,ಇದರಿಂದ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಗಳಿಗೆ ತುತ್ತಾಗಬಹುದು. ಹಗಲು ರಾತ್ತಿ ಎನ್ನದೆ ಯಾವಾಗ ಬೇಕಾದರೂ ತುರ್ತು ಕರೆ ಬರಬಹುದು. ಕೆಲವೊಮ್ಮೆ ಆಪರೇಷನ್ ಸಮಯ ಮಿತಿ ಮೀರಬಹುದು, ಅನಿರೀಕ್ಷಿತವಾಗಿ ಆಘಾತಕಾರಿ ಘಟ್ಟಕ್ಕೆ ತಲುಪಬಹುದು. ಇದರಿಂದ ವಯಕ್ತಿಕ ಬದುಕು ಕೂಡ ಹಾಳಾಗಬಹುದು. ಇದಕ್ಕೆಲ್ಲ ಕುಟುಂಬದ ಸಹಕಾರ ಬಹಳ ಮುಖ್ಯ. ಕೆಲವೊಮ್ಮೆ ರೋಗಿಯು ಆಪರೇಷನ್ ಆದಮೇಲೆ ಯಾವುದೇ ಇತರ ರೋಗದಿಂದ ಅಕಸ್ಮಾತ್ ಮರಣ ಹೊಂದಿದರೆ ವೈದ್ಯ ಮಾನಸಿಕ ಖಿನ್ನತೆಗೆ ಒಳಗಾಗಬಹುದು, ಇದರಿಂದ ಸಂಪೂರ್ಣ ಹೊರ ಬರಲು ಬಹಳಷ್ಟು ಸಮಯ ಬೇಕಾಗಬಹುದು.ಕೆಲವೊಮ್ಮೆ ಕೆಲವರು ಸರ್ಜನ್ ವೃತ್ತಿಯನ್ನೇ ಬಿಟ್ಟಿರುವ ಉದಾಹರಣೆ ಇವೆ.ಸರ್ಜನ್ ಆಗ ಬೇಕಾದರೆ LADIES FINGER ,EAGLE’S EYE AND LIONS HEART ಇರಬೇಕು ಅನ್ನೋ ಮಾತಿದೆ.ನಾವು ಸರ್ಜರಿ ಮಾಡಿ ಹೊಲಿಗೆ ತೆಗೆದು ಗಾಯ ಒಣಗಿದ ಮೇಲೆ ಎಲ್ಲಾವೂ ಮುಗಿಯುವುದಿಲ್ಲ.ರೋಗಿಯು ತನ್ನ ಮುಂದಿನ ಆಗು ಹೋಗುಗಳಿಗೂ ಸರ್ಜನ್ ಕಾರಣ ಅನ್ನೋ ಅಭಿಪ್ರಾಯಕ್ಕೆ ಬರಬಹುದು. ಎಷ್ಟೋ ಕಷ್ಟಕರ ವಾದ ಆಪರೇಷನ್ ಆದ ಮೇಲೆ ಸರ್ಜನ್ ಥಿಯೇಟರ್ನಿಂದ ಹೊರ ಬಂದ ಮೇಲೆ ರೋಗಿಯ ಕಡೆಯವರಿಗೆ ಮನಸ್ಸಿನಲ್ಲಿ ಮೂಡುವ ಕಟ್ಟ ಕಡೆಯ ಪ್ರಶ್ನೆ ಎಷ್ಟು ಹೊಲಿಗೆ ಹಾಕಿರಬಹುದು?? ಕೆಲವೊಮ್ಮೆ ಅತೀ ಬುದ್ದಿವಂತರು ಎಲ್ಲಾ ಸರ್ಜರಿಯನ್ನು ಲ್ಯಾಪರೊಸ್ಕೋಪಿಕ್ ನಲ್ಲಿ ಬಯಸುತ್ತಾರೆ!
ಗ್ರಾಮಾಂತರ ಹಾಗೂ ತಾಲ್ಲೂಕು ಪ್ರದೇಶಗಳಲ್ಲಿ ಕೆಲಸ ಮಾಡುವ ಸರ್ಜನ್ಗಳಿಗೆ ಅವರದ್ದೇ ಆದ ಸಮಸ್ಯೆಗಳಿರುತ್ತವೆ.ತುರ್ತು ಸಮಯದಲ್ಲಿ ಇನ್ನೊಬ್ಬ ಸರ್ಜನ್ ಹಾಗೂ ತಾಲ್ಲೂಕು ಪ್ರದೇಶಗಳಲ್ಲಿ ಕೆಲಸ ಮಾಡುವ ಸರ್ಜನ್ಗಳಿಗೆ ಅವರದ್ದೇ ಆದ ಸಮಸ್ಯೆಗಳಿರುತ್ತವೆ.ತುರ್ತು ಸಮಯದಲ್ಲಿ ಇನ್ನೊಬ್ಬ ಸರ್ಜನ್ ಸಹಾಯಕ್ಕೆ ಬೇಕಾದಾಗ ಬಹಳ ಕಷ್ಟವಾಗುತ್ತೆ .ದೊಡ್ಡ ಪಟ್ಟಣಗಳಲ್ಲಿ ಇರುವ ಉಪಕರಣಗಳ ಹಾಗೂ ವ್ಯವಸ್ಥೆಗಳು ಗ್ರಾಮಾಂತರ ಪ್ರದೇಶಗಳಲ್ಲಿ ಸಿಗುವುದು ಕಷ್ಟ.ನಮ್ಮಲ್ಲಿ ಎಷ್ಟೋ ಬಾರಿ ಇರುವ ವ್ಯವಸ್ಥೆಯಲ್ಲೇ ದೊಡ್ಡ ಸರ್ಜರಿ ಮಾಡಿರುವ ಉದಾಹರಣೆಗಳಿವೆ.
ಸರ್ಜನರು ದುರ್ಜನರಲ್ಲ . ನಾನೊಬ್ಬ ಸರ್ಜನ್ ಎನ್ನಲು ಹೆಮ್ಮೆ ಇದೆ.ಪ್ರತಿಯೊಬ್ಬ ಸರ್ಜನ್ಗೂ ಕೆಲವೊಂದು ಸನ್ನಿವೇಶದಲ್ಲಿ ಏಕಾದರೂ ನಾನು ಸರ್ಜನ್ ಆದೆನೋ ಅನ್ನೋ ಮನೋಭಾವ ಮನಸ್ಸಲ್ಲಿ ಬಂದು ಹೋಗಿರುತ್ತೆ.ರೋಗಿಯು ಗುಣವಾದ ಮೇಲೆ ನಗು ಮುಖ ನೋಡಿದಾಗ ಎಲ್ಲಾ ಮರೆತು ಹೋಗುತ್ತೆ.ಸ್ಮಶಾನ ವೈರಾಗ್ಯ, ಪ್ರಸವ ವೈರಾಗ್ಯ ತರಹ ಓಟಿ ವೈರಾಗ್ಯ ಕೂಡ ಕ್ಷಣಿಕ.
ನಮ್ಮ ಶಸ್ತ್ರಚಿಕಿತ್ಸಕರ ಸಂಘ (ASI) ರಾಷ್ಟ್ರ ಮಟ್ಟದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಯುವ ಸರ್ಜನ್ ಗಳಿಗೆ ನಿರಂತರ ಕಾರ್ಯಾಗಾರಗಳ ಮೂಲಕ ತರಬೇತಿ ನೀಡುತ್ತಿದ್ದು ಬಹಳಷ್ಟು ಸಮಾಜಕ್ಕೆ ಉಪಯೋಗವಾಗಿದೆ.ಅದೇ ರೀತಿಯಲ್ಲಿ ರಾಜ್ಯ ಮಟ್ಟದಲ್ಲಿ ನಮ್ಮ ಸಂಘ ( KSC ASI) ಉತ್ತಮರ ಸಾರಥ್ಯದಲ್ಲಿ ಆಧುನಿಕ ಶಸ್ತ್ರಚಿಕಿತ್ಸಾ ವಿದಾನಗಳನ್ನು ಕಾಲಕಾಲಕ್ಕೆ ಉಣಬಡಿಸುತ್ತಿದೆ. ಜೂನ್ 25 ರ ಶಸ್ತ್ರಚಿಕಿತ್ಸಕರ ದಿನಾಚರಣೆಯ ಪರವಾಗಿ ಎಲ್ಲಾ ಸರ್ಜನ್ ಗಳಿಗೂ ಶುಭಾಶಯಗಳು.
ಡಾ.ಶಿವಪ್ರಕಾಶ್. ಡಿಎಸ್
ಶಸ್ತ್ರಚಿಕಿತ್ಸಾ ತಜ್ಞರು
ಭದ್ರಾವತಿ