ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಿಗೇ ಕಾಸರಗೋಡು ಜಿಲ್ಲೆಯ ತೆಕ್ಕಿಲ್ನಲ್ಲಿರುವ ಟಾಟಾ ಟ್ರಸ್ಟ್ ಸರ್ಕಾರಿ ಆಸ್ಪತ್ರೆಯನ್ನು ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಅಡಿಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಕ್ರಿಟಿಕಲ್ ಕೇರ್ ಯೂನಿಟ್ ಆಗಿ ಪರಿವರ್ತನೆ ಮಾಡಲಾಗುತ್ತಿದೆ.
ಕಾಸರಗೋಡು ಜಿಲ್ಲಾ ಜಿಲ್ಲಾ ಪಂಚಾಯತಿ ಈ ಕ್ರಿಟಿಕಲ್ ಕೇರ್ ಯೂನಿಟ್ ಉಸ್ತುವಾರಿ ವಹಿಸಿಕೊಳ್ಳಲಿದೆ. ಯೋಜನೆಯ ವೆಚ್ಚ ಸುಮಾರು 23.75 ಕೋಟಿ ರೂ.ಗಳಾಗಿದ್ದು, ಇಲ್ಲಿ ಟ್ರಾಮಾ ಕೇರ್ ಸೇರಿದಂತೆ ಅತ್ಯಾಧುನಿಕ ವ್ಯವಸ್ಥೆಗಳು ಲಭ್ಯವಾಗಲಿದೆ.
ಯೂನಿಟ್ಗಾಗಿ 45 ಸಾವಿರ ಚದರ ಅಡಿಯ ಕಟ್ಟಡ ಸಂಕೀರ್ಣ ನಿರ್ಮಾಣವಾಗಲಿದ್ದು, ಆರು ಕೋಟಿ ರೂ. ಮೌಲ್ಯದ ವಿವಿಧ ಅಗತ್ಯ ಉಪಕರಣಗಳನ್ನು ಸ್ಥಾಪಿಸಲಾಗುತ್ತಿದೆ. ಯೋಜನೆ ತಯಾರಿ, ನಿರ್ಮಾಣ ಚಟುವಟಿಕೆಗಳಿಗೆ ಹಿಂದೂಸ್ತಾನ್ ಲ್ಯಾಟೆಕ್ಸ್ ಲಿಮಿಟೆಡ್ ಕಂಪನಿ ಸಾರಥ್ಯ ವಹಿಸಲಿದೆ.