October 9, 2026
Friday, October 9, 2026
spot_img

ಶಿಕ್ಷಣ ವ್ಯವಸ್ಥೆಗೆ ಸರ್ಜರಿ: ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಖಾದರ್ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿದ್ಯಾರ್ಥಿಗಳ ಜೀವನ ಉಜ್ವಲವಾಗಿಸುವ ನಿಟ್ಟಿನಲ್ಲಿ ಹಾಗೂ ರಾಜ್ಯದ ಶಿಕ್ಷಣ ವ್ಯವಸ್ಥೆ ಸುಧಾರಣೆಗೊಳ್ಳಬೇಕು ಎನ್ನುವ ಉದ್ದೇಶದಿಂದ ಸಚಿವ ಸಂಪುಟ ಉಪಸಮಿತಿ ರಚಿಸಲಾಗಿದ್ದು, ಇದರ ಮೊದಲ ಸಭೆ ಇದೆ ಗುರುವಾರ ನಡೆಯಲಿದೆ.

ಆರೋಗ್ಯ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಸಮಿತಿಯ ಕಾರ್ಯ ಯೋಜನೆ ಹಾಗೂ ಸರ್ಕಾರಕ್ಕೆ ನೀಡಬೇಕಾದ ಶಿಫಾರಸುಗಳ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಸಮಿತಿಯಲ್ಲಿ ಯಾರ್ಯಾರು ಇದ್ದಾರೆ?

ಸಮಿತಿಯಲ್ಲಿ ಯು.ಟಿ. ಖಾದರ್ ಅಧ್ಯಕ್ಷರಾಗಿದ್ದು, ಗೃಹ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಸದಸ್ಯರಾಗಿದ್ದಾರೆ.

ಏನೆಲ್ಲಾ ಪರಿಶೀಲನೆಗೊಳ್ಳಲಿದೆ?

ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಿಗೆ ಕಡಿವಾಣ, ಪರೀಕ್ಷೆ ಮತ್ತು ನೇಮಕಾತಿಗೆ ನಿಗದಿತ ಕ್ಯಾಲೆಂಡರ್, ಖಾಸಗಿ ಶಾಲಾ-ಕಾಲೇಜು ಹಾಗೂ ಕೋಚಿಂಗ್ ಕೇಂದ್ರಗಳ ಶುಲ್ಕ ನಿಯಂತ್ರಣ, ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಖಾಲಿ ಹುದ್ದೆಗಳ ಭರ್ತಿ, ಲ್ಯಾಬ್, ಗ್ರಂಥಾಲಯ ಮತ್ತು ಹಾಸ್ಟೆಲ್ ಸೌಲಭ್ಯಗಳ ಸುಧಾರಣೆ, ಪರೀಕ್ಷಾ ಒತ್ತಡ ಮತ್ತು ಆತ್ಮಹತ್ಯೆ ತಡೆಯಲು ಕೌನ್ಸೆಲಿಂಗ್ ವ್ಯವಸ್ಥೆ ಹೀಗೆ ಹತ್ತು ಹಲವು ವಿಚಾರಗಳ ಕುರಿತು ಈ ಸಮಿತಿ ಚರ್ಚಿಸಲಿದೆ.

ಒಟ್ಟಾರೆ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಜೊತೆಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಉತ್ತಮ ಸೌಲಭ್ಯ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಉಪಸಮಿತಿಯ ಶಿಫಾರಸುಗಳು ಮಹತ್ವ ಪಡೆಯಲಿವೆ.

Must Read