ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ & ಆರ್ಥಿಕ ಸಮೀಕ್ಷೆಗೆ ನೀಡಲಾದ ಗಡುವು ಮುಗಿಯುತ್ತ ಬಂದಿದ್ದು,ಆದ್ರೆ ಗಣತಿ ಕಾರ್ಯ ಮಾತ್ರ ಸದ್ಯ ಪೂರ್ಣವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಅಕ್ಟೋಬರ್ 18ರ ವರೆಗೆ ಸಮೀಕ್ಷೆಯ ಅವಧಿಯನ್ನು ವಿಸ್ತರಿಸಲಾಗಿದ್ದರೂ ರಾಜಧಾನಿ ಬೆಂಗಳೂರಲ್ಲಿ ಈ ವರೆಗೆ ಶೇ.30ರಷ್ಟು ಮನೆಗಳ ಗಣತಿ ಮಾತ್ರ ನಡೆದಿದೆ. ಈ ಹಿನ್ನಲೆ ಜಿಬಿಎ ಮುಖ್ಯ ಆಯುಕ್ತರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಪತ್ರ ಬರೆದಿದ್ದು, ಮುಖ್ಯ ಆಯುಕ್ತರು ಮತ್ತು 5 ಪಾಲಿಕೆ ಆಯುಕ್ತರು ಈ ಬಗ್ಗೆ ಗಮನಹರಿಸುವಂತೆ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಸಮೀಕ್ಷೆದಾರರಿಗೆ ದಿನಕ್ಕೆ 16 ಮನೆಗಳ ಗುರಿ ನೀಡಲಾಗಿತ್ತು. ಈ ವೇಗದಲ್ಲಿ ಕಾರ್ಯ ನಡೆದರೆ ಸಮೀಕ್ಷೆಯನ್ನು ಅಕ್ಟೋಬರ್ 18 ಅಥವಾ 19ರೊಳಗೆ ಪೂರ್ಣಗೊಳಿಸಲು ಸಾಧ್ಯ ಎಂಬ ಅಂದಾಜು ನೀಡಲಾಗಿತ್ತು. ಆದರೆ ಬೆಂಗಳೂರಲ್ಲಿ ದಿನಕ್ಕೆ ಕೇವಲ ಸರಾಸರಿ 7-8 ಮನೆಗಳ ಸಮೀಕ್ಷೆ ಆಗುತ್ತಿದೆ. ಪ್ರಸ್ತುತ ನಡೆದಿರುವುದು ಶೇಕಡಾ 30ರಷ್ಟು ಮನೆಗಳ ಗಣತಿ ಮಾತ್ರ. ಸಮೀಕ್ಷೆದಾರರು ಅಗತ್ಯಮಟ್ಟದ ಫಲಿತಾಂಶ ನೀಡದಿರಲು ಅವರ ಮೇಲ್ವಿಚಾರಕರ ಕಾರ್ಯಧಕ್ಷತೆಯಲ್ಲಿನ ಕೊರತೆ ಕಾರಣ. ಮತ್ತೆ ಸಮೀಕ್ಷಾ ಅವಧಿಯನ್ನು ವಿಸ್ತರಿಸುವುದು ತುಂಬಾ ಕಷ್ಟಕರ. ಸಮೀಕ್ಷೆ ವಿಸ್ತರಿಸುವ ಸ್ಥಿತಿ ಬಂದರೆ ಗಣತಿದಾರರು ಕಾರ್ಯ ನಿರ್ವಹಿಸುತ್ತಿರುವ ಇಲಾಖೆಗಳ ನಿಯಮಿತ ಕಾರ್ಯದಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಸಮೀಕ್ಷಾ ಪ್ರಗತಿಗೆ ವೈಯಕ್ತಿಕ ಗಮನಹರಿಸಿ ಕ್ರಮಕೈಗೊಳ್ಳಿ ಎಂದು ಶಾಲಿನಿ ರಜನೀಶ್ ತಿಳಿಸಿದ್ದಾರೆ.
ರಾಜ್ಯಾದ್ಯಂತ ಸೆಪ್ಟೆಂಬರ್ 22ರಿಂದ ಆರಂಭವಾಗಿದ್ದ ಜಾತಿಗಣತಿಯನ್ನು ಅಕ್ಟೋಬರ್ 7ರ ಒಳಗೆ ಮುಕ್ತಾಯಗೊಳಿಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ, ಗಣತಿ ಕಾರ್ಯ ಬಾಕಿ ಉಳಿದ ಹಿನ್ನಲೆ ಅಕ್ಟೋಬರ್ 18ರ ವರೆಗೆ ಜಾತಿ ಸಮೀಕ್ಷೆ ಕಾರ್ಯ ವಿಸ್ತರಣೆಗೊಂಡಿತ್ತು. ಈ ಕೆಲಸದಲ್ಲಿ ಪಾಲ್ಗೊಂಡಿರುವ ಬಹುತೇಕರು ಸರ್ಕಾರಿ ಶಾಲೆ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರಾದ ಕಾರಣ ಅ.18ರ ವರೆಗೆ ಶಾಲೆಗಳಿಗೂ ರಜೆ ಘೋಷಿಸಲಾಗಿತ್ತು.