ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ವಿಕ್ಕಿ ಕೌಶಲ್ ಅಭಿನಯದ ಛಾವಾ ಸಿನಿಮಾ ಕುರಿತು ನಟಿ ಸ್ವರಾ ಭಾಸ್ಕರ್ ಮಾಡಿದ್ದ ಪೋಸ್ಟ್ ಇದೀಗ ಹಿಂದುಗಳ ಕೆಂಗಣ್ಣಿಗೆ ಗುರಿ ಆಗಿದೆ .
ಮುಸ್ಲಿಂ ರಾಜಕಾರಣಿಯನ್ನು ಮದುವೆಯಾದಾಗಿನಿಂದಲೂ ನಟಿ ಸ್ವರಾ ಭಾಸ್ಕರ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿ ಆಗ್ತಾನೆ ಇದ್ದಾರೆ. ಇದೀಗ ನಟಿ ಸ್ವರಾ ಭಾಸ್ಕರ್ ಅವರು ಛತ್ರಪತಿ ಸಂಭಾಜಿ ಹೋರಾಟದ ಬದುಕಿನ ಕುರಿತ ಛಾವಾ ಸಿನಿಮಾ ಬಗ್ಗೆ ಶಾಕಿಂಗ್ ಕಮೆಂಟ್ ಮಾಡಿದ್ದಾರೆ.
ಬಾಲಿವುಡ್ ನಟ ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ ಹಾಗೂ ಅಕ್ಷಯ್ ಖನ್ನಾ ನಟನೆಯ ಛಾವಾ ಸಿನಿಮಾ ಭರ್ಜರಿ ಸದ್ದು ಮಾಡುತ್ತಿದೆ. ಲಕ್ಷ್ಮಣ್ ಉಟೇಕರ್ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಛತ್ರಪತಿ ಸಂಭಾಜಿ ಹೋರಾಟದ ಈ ಸಿನಿಮಾ ಫೆಬ್ರವರಿ 14ರಂದು ಬಿಡುಗಡೆಯಾಗಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಬಾಕ್ಸಾಪೀಸ್ ಕಲೆಕ್ಷನ್ ಕೂಡ ಉತ್ತಮವಾಗಿದೆ.
ಸ್ವರಾ ಭಾಸ್ಕರ್ ವಿವಾದಾತ್ಮಕ ಪೋಸ್ಟ್
ಚಾವಾ ಚಿತ್ರ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಸಿನಿಮಾ ನೋಡಿ ಭಾವುಕರಾಗುವವರ ಬಗ್ಗೆ ಸ್ವರಾ ಭಾಸ್ಕರ್ ವಿವಾದಾತ್ಮಕವಾಗಿ ಮಾತನಾಡಿದ್ದಾರೆ. ಈ ಚಿತ್ರದ ಕಥೆ 500 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ. ಆಗ ಏನಾಯಿತು ಎಂದು ಯಾರು ನೋಡಿದರು? ಕಾಲ್ಪನಿಕ ಕಥೆಗಳನ್ನು ಆಧರಿಸಿದ ಚಲನಚಿತ್ರವನ್ನು ನೋಡಿದ ನಂತರ ಜನರು ಭಾವುಕರಾಗುತ್ತಿರುವುದು ವಿಚಿತ್ರವಾಗಿದೆ ಎಂದು ನಟಿ ಬರೆದಿದ್ದಾರೆ.
ಕುಂಭಮೇಳದ ಕಾಲ್ತುಳಿತಕ್ಕೂ ಲಿಂಕ್
ನಮ್ಮ ಕಣ್ಣೆದುರೇ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರಯಾಗರಾಜ್ ಕುಂಭಮೇಳದಲ್ಲಿ ಅನೇಕ ಭಕ್ತರು ಪ್ರಾಣ ಕಳೆದುಕೊಂಡ್ರು. ಅದೇ ರೀತಿ, ಇನ್ನೂ ಅನೇಕ ದೇಹಗಳು ಹೊರಬರದಂತೆ ತಡೆಯಲಾಯಿತು. ಈ ಘಟನೆಗಿಂತ ಛಾವಾ ಚಿತ್ರದ ಘಟನೆಗೆ ಜನರು ಪ್ರತಿಕ್ರಿಯಿಸುತ್ತಿರುವ ರೀತಿ ನೋಡಿದ್ರೆ, ಜನರ ಮನಸ್ಥಿತಿ ಇದೇ ಎಂಬುದನ್ನು ತೋರಿಸುತ್ತದೆ ಎಂದು ನಟಿ ಬರೆದಿದ್ದಾರೆ. ನಟಿ ಸ್ವರಾ ಭಾಸ್ಕರ್ ಅವರ ಕಾಮೆಂಟ್ ಗಳು ಈಗ ವೈರಲ್ ಆಗಿವೆ. ನಟಿ ವಿರುದ್ಧ ಹಿಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಈ ಚಿತ್ರವು ಮರಾಠಾ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಶಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ಇದರಲ್ಲಿರುವ ಪ್ರತಿಯೊಂದು ದೃಶ್ಯವೂ ಭಾವನಾತ್ಮಕ, ದೇಶಭಕ್ತಿ ಮತ್ತು ಕಣ್ಣೀರು ತರಿಸುವಂತಿದೆ. ಈ ಸಿನಿಮಾ ನೋಡಿದ ಅನೇಕ ಅಭಿಮಾನಿಗಳು ಭಾವುಕರಾಗ್ತಿದ್ದಾರೆ.