ಸ್ವರ್ಗೀಯ ಹರಿಭಾವು ವಝೆ- ರಂಗಾಹರಿ ಅವರ ಸಂಸ್ಮರಣೆ,‘ಚರಿತಾರ್ಥ’ ಪುಸ್ತಕ ಲೋಕಾರ್ಪಣೆ

ಹೊಸದಿಗಂತ ವರದಿ,ಮಂಗಳೂರು:

ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ, ದೇಶ ಹಿತ ಚಿಂತನೆಯೊಂದಿಗೆ ಸಮರ್ಪಣಾಭಾವದಿಂದ ದೇಶಕ್ಕಾಗಿಯೇ ಬದುಕಿದವರ ಸ್ಮರಣೆ ನಮಗೆಲ್ಲರಿಗೂ ಪ್ರೇರಣಾದಾಯಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಾದ ಸು.ರಾಮಣ್ಣ ಹೇಳಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ವತಿಯಿಂದ ಇಲ್ಲಿನ ಸಂಘನಿಕೇತನದಲ್ಲಿ ಗುರುವಾರ ಆಯೋಜಿಸಿದ್ದ ಸ್ವರ್ಗೀಯ ಹರಿಭಾವು ವಝೆ, ಸ್ವರ್ಗೀಯ ರಂಗಾಹರಿ ಅವರ ಸಂಸ್ಮರಣೆ ಮತ್ತು ಹರಿಭಾವು ವಝೆ ಅವರ ಜೀವನ ಕುರಿತ ‘ಚರಿತಾರ್ಥ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೇಷ್ಠರೂ-ಶ್ರೇಷ್ಠರೂ ಆದ ರಂಗಾಹರಿ ಅವರು ಧ್ಯೇಯಕ್ಕಾಗಿ ಬದುಕಿದವರು. ಅವರು ನಿರಂತರ ತಪಸ್ವಿಯೂ, ಕರ್ಮಯೋಗಿಯೂ ಹೌದು. ಸಮರ್ಪಣಾಭಾವದಿಂದ ರಾಷ್ಟ್ರಹಿತಕ್ಕಾಗಿಯೇ ಬದುಕನ್ನು ಮುಡಿಪಾಗಿಟ್ಟವರು. ಅವರ ಸ್ಮರಣೆಯೇ ನಮಗೆ ಪ್ರೇರಣೆ ನೀಡುವಂತದ್ದು ಎಂದರು.

ಸ್ವರ್ಗೀಯ ಹರಿಭಾವು ವಝೆ ಅವರು ಸಂಘಟನೆಗೆ ಬದ್ಧರಾಗಿ ಸಮರ್ಪಿತ ಮನೋಭಾವದಿಂದ ಬದುಕಿದವರು. ಅವರ ಸೆಳೆತಕ್ಕೆ ಸಿಕ್ಕವರಲ್ಲಿ ನಾನೂ ಒಬ್ಬ. ಪ್ರಚಾರಕರು ಹೇಗೆ ಇರಬೇಕು ಎಂಬುದಕ್ಕೆ ಮಾದರಿಯಾಗಿದ್ದರು. ಅವರ ಆದರ್ಶದ ಬದುಕಿನ ಪುಸ್ತಕವನ್ನು ಪ್ರತಿಯೊಬ್ಬರೂ ಓದುವ ಮೂಲಕ ಪ್ರೇರಿತರಾಗಬೇಕು ಎಂದು ಸು.ರಾಮಣ್ಣ ನುಡಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಮುಂಡ್ಕೂರು ವಾಸುದೇವ ಕಾಮತ್ ಪುಸ್ತಕ ಲೋಕಾರ್ಪಣೆ ಮಾಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಂಘ ಚಾಲಕ್ ಡಾ.ಪಿ.ವಾಮನ ಶೆಣೈ, ಮಂಗಳೂರು ವಿಭಾಗ ಸಂಘಚಾಲಕ್ ಗೋಪಾಲ ಚೆಟ್ಟಿಯಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಂಗಳೂರು ಮಹಾನಗರ ಸಹಕಾರ್ಯವಾಹ ವಿಕಾಸ ಅತಿಥಿಗಳ ಪರಿಚಯ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!