ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಗೋ 6E-1052 ಬ್ಯಾಂಕಾಕ್-ಮುಂಬೈ ವಿಮಾನದಲ್ಲಿ ಸಿಬ್ಬಂದಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಸ್ವೀಡಿಷ್ ಪ್ರಜೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ವ್ಯಕ್ತಿಯನ್ನು ಕ್ಲಾಸ್ ಎರಿಕ್ ಹೆರಾಲ್ಡ್ ಜೋನಾಸ್ ವೆಸ್ಟ್‌ಬರ್ಗ್ (62) ಎಂದು ಗುರುತಿಸಲಾಗಿದೆ. ಗುರುವಾರ, ಬ್ಯಾಂಕಾಕ್‌ನಿಂದ ಮುಂಬೈಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕನೊಬ್ಬ ಗಗನಸಖಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಗಗನಸಖಿಯ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ವೆಸ್ಟ್‌ಬರ್ಗ್ ಮೊದಲು ಆಹಾರಕ್ಕಾಗಿ ಸಿಬ್ಬಂದಿಯೊಂದಿಗೆ ಜಗಳವಾಡಿದನು. ತನಗೆ ಬೇಕಾದ ಆಹಾರ ಸಿಗುತ್ತಿಲ್ಲ ಎಂದು ವಿಮಾನದ ಸಿಬ್ಬಂದಿಯೊಂದಿಗೆ ವಿವಾದ ಶುರುವಾಗಿದೆ. ಈ ಪ್ರಕ್ರಿಯೆಯಲ್ಲಿ ಗಗನಸಖಿ ಚಿಕನ್ ನೀಡಲು ಪಿಒಎಸ್ ಟರ್ಮಿನಲ್ ಬಳಿ ಬಂದಿದ್ದು, ಆರೋಪಿ ಆಕೆಯ ಕೈಯನ್ನು ಅಸಭ್ಯವಾಗಿ ಮುಟ್ಟಿದ್ದಾನೆ. ಸಹ ಪ್ರಯಾಣಿಕನ ಮೇಲೂ ಹಲ್ಲೆ ನಡೆಸಿ ವಿಮಾನದಲ್ಲಿ ಅವ್ಯವಸ್ಥೆ ಸೃಷ್ಟಿಸಿದ್ದಾನೆ. ಪ್ರಕರಣದ ಆರೋಪಿ ಸ್ವೀಡನ್ ಪ್ರಜೆ ಕ್ಲಾಸ್ ಎರಿಕ್ ಹೆರಾಲ್ಡ್ ಜೋನಾಸ್ ವೆಸ್ಟ್ ಬರ್ಗ್ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಈ ಕ್ರಮದಲ್ಲಿ ಗುರುವಾರ ಇಂಡಿಗೋ ವಿಮಾನ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಳಿಕ ಪೊಲೀಸರು ಆತನನ್ನು ಬಂಧಿಸಿ ಅಂಧೇರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಬಳಿಕ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಕಳೆದ ಮೂರು ತಿಂಗಳಲ್ಲಿ ಭಾರತದ ವಿಮಾನಗಳಲ್ಲಿ ಇಂತಹ ಘಟನೆ ಎಂಟನೇ ಬಾರಿ ಬೆಳಕಿಗೆ ಬಂದಿದ್ದು, ಸಂಚಲನ ಮೂಡಿಸಿದೆ.