ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದಾ ಅಕ್ಕಿ, ರಾಗಿ, ಬೇರೆ ಬೇರೆ ರೀತಿಯ ರೊಟ್ಟಿ ಮಾಡಿ ತಿಂದು ಬೇಜಾರಾಗಿದ್ರೆ. ಇದೀಗ ಹಸಿ ಜೋಳ(ಸ್ವೀಟ್ ಕಾರ್ನ್) ಸಿಗುವ ಕಾಲ ಹೀಗೊಮ್ಮೆ ಮಸಾಲ ಸೇರಿಸಿ ರೊಟ್ಟಿ ಮಾಡಿ ನೋಡಿ ಬಾಯಿ ಚಪ್ಪರಿಸಿ ತಂತೀರ.
ಬೇಕಾಗುವ ಪದಾರ್ಥಗಳು:
ಹಸಿ ಜೋಳ-ಎರಡು
ಹೆಚ್ಚಿದ ಈರುಳ್ಳಿ-ಒಂದು ಕಪ್
ತುರಿದ ಕ್ಯಾರೆಟ್-ಒಂದು ಕಪ್
ಕೊತ್ತಂಬರಿ ಸೊಪ್ಪು-ಒಂದು ಕಪ್
ಹಸಿ ಮೆಣಸಿನಕಾಯಿ-ನಾಲ್ಕು
ಕಡಲೆ ಬೀಜ-ಒಂದು ಕಪ್
ಉಪ್ಪು-ರುಚಿಗೆ
ಹಸಿ ತೆಂಗಿನಕಾಯಿ-ಅರ್ಧ ಕಪ್
ಮಾಡುವ ವಿಧಾನ:
ಮೊದಲಿಗೆ ಹಸಿ ಜೋಳವನ್ನು ಬಿಡಿಸಿಟ್ಟುಕೊಂಡು ಒಮ್ಮೆ ನೀರಿನಲ್ಲಿ ತೊಳೆದು ಮಿಕ್ಸಿ ಜಾರಿಗೆ ಹಾಕಿ ನೀರು ಹಾಕದೆ ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಪಾತ್ರೆಯೊಂದಕ್ಕೆ ಹಾಕಿ ಹೆಚ್ಚಿಟ್ಟುಕೊಂಡ ಈರುಳ್ಳಿ, ಕ್ಯಾರೆಟ್, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ, ಉಪ್ಪು ಎಲ್ಲವನ್ನು ಹಾಕಿ. ಈಗ ಇದಕ್ಕೆ ಮತ್ತಷ್ಟು ರುಚಿ ಕೊಡಲು ಕಡಲೇ ಬೀಜವನ್ನು ಹುರಿದು ಸಿಪ್ಪೆ ತೆಗೆದು ಅರ್ಧಂಬರ್ಧ ಕುಟ್ಟಿ ಪುಡಿ ಮಾಡಿ ಸೇರಿಸಿ ನೀರು ಹಾಕದೆ ಚೆನ್ನಾಗಿ ಕಲಸಿ( ಅಗತ್ಯವಿದ್ದರೆ ನೀರು ಹಾಕಿ).
ಈಗ ಇದನ್ನು ದೊಡ್ಡ ಉಂಡೆಗಳನ್ನಾಗಿ ಮಾಡಿ ಹೋಳಿಗೆ ಮಾಡುವ ಪೇಪರ್, ಅಥವಾ ಬಾಳೆ ಎಲೆ ತೆಗೆದುಕೊಂಡು ಎಣ್ಣೆ ಸವರಿ ಅಗಲವಾಗಿ ತಟ್ಟಿಕೊಳ್ಳಿ. ಬಳಿಕ ಒಲೆ ಮೇಲೆ ಕಾವಲಿ ಇಟ್ಟು ಬಿಸಿಯಾದ ಬಳಿಕ ಎಣ್ಣೆ ಸವರಿ ತಟ್ಟಿದ ರೊಟ್ಟಿ ಮಿಶ್ರಣವನ್ನ ಕಾವಲಿ ಮೇಲೆ ಹಾಕಿ. ಎರಡೂ ಬದಿ ಬೇಯಿಸಿ ತೆಗೆಯಿರಿ. ಬೆಣ್ಣೆ, ತುಪ್ಪ, ಯಾವುದಾದರೂ ಪಲ್ಯದೊಂದಿಗೆ ಹಸಿ ಜೋಳದ ರೊಟ್ಟಿಯನ್ನು ಸವಿಯಿರಿ.