LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಿಹಿ ಸುದ್ದಿ: eKYC ದೃಢೀಕರಣಕ್ಕೆ ಇಲ್ಲ ಗಡುವು ಎಂದ ಕೇಂದ್ರ ಸರಕಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಎಲ್‌ಪಿಜಿ ಸಿಲಿಂಡರ್‌ಗಳಿಗೆ ಇಕೆವೈಸಿ (eKYC) ದೃಢೀಕರಣ ಪ್ರಕ್ರಿಯೆಯನ್ನು ಅನುಸರಿಸಲು ಯಾವುದೇ ಗಡುವು ಇಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಜನತೆಗೆ ಗುಡ್ ನ್ಯೂಸ್ ನೀಡಿದ್ದಾರೆ.

ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು,ತೈಲ ಮಾರುಕಟ್ಟೆ ಕಂಪನಿಗಳು ಅಥವಾ ಒಎಮ್‌ಸಿಗಳು (OMC) ನಕಲಿ ಖಾತೆಗಳನ್ನು ತೊಡೆದು ಹಾಕಲು ಮತ್ತು ವಾಣಿಜ್ಯ ಸಿಲಿಂಡರ್‌ಗಳ ಮೋಸದ ಬುಕ್ಕಿಂಗ್ ಅನ್ನು ತಡೆಯಲು ಎಲ್‌ಪಿಜಿ ಗ್ರಾಹಕರಿಗೆ ಇಕೆವೈಸಿ ಆಧಾರ್ ದೃಢೀಕರಣವನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತಿವೆ. ಕಳೆದ ಎಂಟು ತಿಂಗಳಿನಿಂದ ಈ ಪ್ರಕ್ರಿಯೆ ಜಾರಿಯಲ್ಲಿದೆ. ನಿಜವಾದ ಗ್ರಾಹಕರು ಮಾತ್ರ ಎಲ್‌ಪಿಜಿ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ನಿಯಮ ಮಾಡಿದೆ ಎಂದು ಹರ್ದೀಪ್ ಸಿಂಗ್ ಹೇಳಿದ್ದಾರೆ.

ಎಲ್‌ಪಿಜಿ ಸಿಲಿಂಡರ್‌ಗಳನ್ನು ಗ್ರಾಹಕರಿಗೆ ತಲುಪಿಸುವಾಗ ಎಲ್‌ಪಿಜಿ ವಿತರಣಾ ಸಿಬ್ಬಂದಿ ರುಜುವಾತುಗಳನ್ನು ಪರಿಶೀಲಿಸುತ್ತಾರೆ. ವಿತರಣಾ ಸಿಬ್ಬಂದಿ ತಮ್ಮ ಮೊಬೈಲ್ ಫೋನ್ ಬಳಸಿ ಗ್ರಾಹಕರ ಆಧಾರ್ ಮಾಹಿತಿಯನ್ನು ಅಪ್ಲಿಕೇಶನ್ ಮೂಲಕ ಅಪ್ಲೋಡ್ ಮಾಡುತ್ತಾರೆ. ಗ್ರಾಹಕರು ಸ್ವೀಕರಿಸುವ ಒಟಿಪಿಯನ್ನು ಬಳಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ. ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ವಿತರಕರ ಶೋರೂಮ್ ಅನ್ನು ಸಹ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು .

ಗ್ರಾಹಕರು ಒಎಮ್‌ಸಿ ಅಪ್ಲಿಕೇಶನ್‌ಗಳನ್ನು ಸ್ಥಾಪಿಸಬಹುದು ಮತ್ತು ಇಕೆವೈಸಿ ಅನ್ನು ಖುದ್ದು ಪೂರ್ಣಗೊಳಿಸಬಹುದು. ಈ ಚಟುವಟಿಕೆಗೆ ತೈಲ ಮಾರುಕಟ್ಟೆ ಕಂಪನಿಗಳು ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಗಡುವು ಇಲ್ಲ. ಎಲ್‌ಪಿಜಿ ವಿತರಕರ ಶೋರೂಮ್‌ಗಳಲ್ಲಿ ಗ್ರಾಹಕರ ‘ಮಸ್ಟರಿಂಗ್’ ಇಲ್ಲ ಎಂದು ಒಎಮ್‌ಸಿಗಳು ಸ್ಪಷ್ಟಪಡಿಸಿವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!