ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶೀಯ ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮತ್ತು ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನದ ಮೂಲಕ ಜಾರ್ಖಂಡ್ ತಂಡ 2025ರ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯನ್ನು ಮೊದಲ ಬಾರಿಗೆ ತನ್ನದಾಗಿಸಿಕೊಂಡಿದೆ. ಗುರುವಾರ ನಡೆದ ಫೈನಲ್ ಪಂದ್ಯದಲ್ಲಿ ಹರಿಯಾಣ ತಂಡವನ್ನು 69 ರನ್‌ಗಳ ಅಂತರದಲ್ಲಿ ಮಣಿಸುವ ಮೂಲಕ ಜಾರ್ಖಂಡ್ ಹೊಸ ಇತಿಹಾಸ ಬರೆದಿದೆ.
ಎಂಸಿಎ ಪುಣೆ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಭರ್ಜರಿ 262 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿತು. ನಾಯಕ ಇಶಾನ್ ಕಿಶನ್ ಅವರ ಆಕ್ರಮಣಕಾರಿ ಶತಕವೇ ಈ ಗೆಲುವಿನ ಅಡಿಪಾಯವಾಗಿತ್ತು. ಕಿಶನ್ ಕೇವಲ 45 ಎಸೆತಗಳಲ್ಲಿ ಶತಕ ಪೂರೈಸಿ, 49 ಬಾಲ್‌ಗಳಲ್ಲಿ 101 ರನ್‌ಗಳಿಸಿ ಹರಿಯಾಣ ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡಲಿಲ್ಲ. ಅವರ ಜೊತೆಗೆ ಕುಮಾರ್ ಕುಶಾಗ್ರ 81 ರನ್‌ಗಳ ಅಮೂಲ್ಯ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಅನುಕುಲ್ ರಾಯ್ ಮತ್ತು ರಾಬಿನ್ ಮಿಂಜ್ ವೇಗದ ರನ್‌ಗಳನ್ನು ಸೇರಿಸಿ ಸ್ಕೋರ್‌ನ್ನು ಮತ್ತಷ್ಟು ಎತ್ತರಕ್ಕೆ ತಳ್ಳಿದರು.
263 ರನ್‌ಗಳ ಗುರಿ ಬೆನ್ನಟ್ಟಿದ ಹರಿಯಾಣ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕ ಹೋರಾಟ ನೀಡಿದರೂ, 18.3 ಓವರ್‌ಗಳಲ್ಲಿ 193 ರನ್‌ಗಳಿಗೆ ಆಲೌಟ್ ಆಯಿತು. ಜಾರ್ಖಂಡ್ ಪರ ಸುಶಾಂತ್ ಮಿಶ್ರಾ ಮತ್ತು ಬಾಲ್ ಕೃಷ್ಣ ತಲಾ ಮೂರು ವಿಕೆಟ್ ಪಡೆದು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಶತಕ ಸಿಡಿಸಿದ ಇಶಾನ್ ಕಿಶನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

