ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನಡೆಯುತ್ತಿದ್ದ ಜಾತಿ ಜನಗಣತಿ ಸಮೀಕ್ಷೆ ಹಿನ್ನಲೆ ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳಿಗೆ ದಸರಾ ರಜೆ ವಿಸ್ತರಣೆ ಮಾಡಿತ್ತು. ಎಲ್ಲಾ ಶಿಕ್ಷಕರನ್ನು ಸಮೀಕ್ಷೆಗೆ ಬಳಸಿಕೊಳ್ಳಲಾಗಿತ್ತು. ಹೀಗಾಗಿ ಮಕ್ಕಳಿಗೆ ಮತ್ತಷ್ಟು ರಜೆ ಕೊಟ್ಟಿದ್ದರು. ಆದರೆ ಇದೀಗ ಮಕ್ಕಳೆಲ್ಲ ಶಾಲೆಗೆ ವಾಪಾಸಾಗಿದ್ದು, ಸಿಲಬಸ್ ಹೊರೆ ಅವರ ಮೇಲಿದೆ!
ಮಕ್ಕಳಿಗೆ ಆಟದ ಬ್ರೇಕ್ ಕೂಡ ನೀಡದೇ ಪಾಠಗಳನ್ನು ಮಾಡಲಾಗುತ್ತಿದೆ. ಸಿಲಬಸ್ ಕಂಪ್ಲೀಟ್ ಮಾಡಲು ಶಿಕ್ಷಕರು ಹರಸಾಹಸ ಪಡುತ್ತಿದ್ದು, ಅದರ ಒತ್ತಡ ಮಕ್ಕಳ ಮೇಲೆ ಬಿದ್ದಿದೆ. ಆಟಕ್ಕೆ ಯಾವುದೇ ಸಮಯ ನೀಡದೇ ಬರೀ ಪಾಠ ಮಾಡುತ್ತಿರುವುದು ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.
ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಮೀಕ್ಷೆಯ ಪರಿಣಾಮವಾಗಿ ತರಗತಿಗಳ ಸಂಖ್ಯೆ ಹೆಚ್ಚಿಸಿ, ಆಟದ ಸಮಯ ಕಡಿಮೆ ಮಾಡಲಾಗುತ್ತಿದೆ. ಇದಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸಿಡಿದೆದ್ದಿದೆ. ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಎಂದು ಕಿಡಿಕಾರಿದೆ.
ರಾಜ್ಯ ಮಕ್ಕಳ ಹಕ್ಕುಗಳ ಆಯೋಗವು ಶಿಕ್ಷಣ ಇಲಾಖೆಗೆ ಪತ್ರ ಬರೆದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತರಗತಿಯ ಮಕ್ಕಳ ವೇಳಾಪಟ್ಟಿಯಲ್ಲಿ ಆಟದ ಅವಧಿ ಕಡಿತಗೊಂಡಿದೆ ಎಂದು ಆರೋಪಿಸಿದೆ. ಸ್ವತಃ ಆಯೋಗದ ಸದಸ್ಯರು ಹಲವು ಪ್ರೌಢಶಾಲೆಗಳ ಮಕ್ಕಳ ಜೊತೆ ಮಾತನಾಡಿ ಸತ್ಯ ಪರಿಶೀಲಿಸಿದ್ದಾರೆ.
ಮಕ್ಕಳು ಆಟದ ಸಮಯ ಕಡಿಮೆಯಾದ ಬಗ್ಗೆ ದೂರು ಹೇಳಿದ್ದಾರೆ. ಆಟ, ಕಲೆ, ಸಂಗೀತದಂತಹ ಪಠ್ಯೇತರ ಚಟುವಟಿಕೆಗಳು ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಾಸಕ್ಕೆ ಅವಿಭಾಜ್ಯ ಅಂಗ ಎಂದು ಆಯೋಗ ಒತ್ತಿ ಹೇಳಿದೆ. ಇವುಗಳನ್ನು ಕಡಿಮೆ ಮಾಡುವುದು ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಗೆ ಹಾನಿಕಾರಕವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಕೇವಲ ಪಾಠಗಳ ಮೇಲೆ ಒತ್ತು ನೀಡಿ ಆಟವನ್ನು ಕಡಿಮೆ ಮಾಡುವುದು ತಪ್ಪು ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಶಿಕ್ಷಕರು ಜಾತಿಗಣತಿ ಮಾಡಿದ್ದಕ್ಕೆ ಸಿಲಬಸ್ ಬಾಕಿ! ಇದೀಗ ಮಕ್ಕಳಿಗೆ ಆಟದ ಬ್ರೇಕೂ ಇಲ್ಲ

