ಹೊಸದಿಗಂತ ಬೆಳಗಾವಿ:
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಟಿ.ಶ್ಯಾಮ್ ಭಟ್ ಅವರು ಬುಧವಾರ ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ (ಬಿಮ್ಸ್) ಅನಿರೀಕ್ಷಿತ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆ ಹಾಗೂ ರೋಗಿಗಳಿಗೆ ದೊರೆಯುತ್ತಿರುವ ಸೌಲಭ್ಯಗಳ ಕುರಿತು ಸಮಗ್ರ ಪರಿಶೀಲನೆ ನಡೆಸಿದರು.
ಆಸ್ಪತ್ರೆಯ ಪ್ರಸೂತಿ ಮತ್ತು ಮಕ್ಕಳ ವಿಭಾಗಕ್ಕೆ ಭೇಟಿ ನೀಡಿದ ಅಧ್ಯಕ್ಷರು, ಅಲ್ಲಿ ದಾಖಲಾಗಿರುವ ರೋಗಿಗಳೊಂದಿಗೆ ನೇರವಾಗಿ ಚರ್ಚಿಸಿದರು. ಆಸ್ಪತ್ರೆಯಲ್ಲಿ ಸಿಗುತ್ತಿರುವ ಚಿಕಿತ್ಸೆ, ಗುಣಮಟ್ಟ ಮತ್ತು ಸಿಬ್ಬಂದಿಯ ಸ್ಪಂದನೆಯ ಬಗ್ಗೆ ಮಾಹಿತಿ ಪಡೆದರು. ಬಳಿಕ ಆಸ್ಪತ್ರೆಯ ದಾಖಲೆ ಪತ್ರಗಳನ್ನು ಹಾಗೂ ಹೊರಗುತ್ತಿಗೆ ನೌಕರರ ಕಾರ್ಯನಿರ್ವಹಣೆಯ ವಿವರಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.

ಪರಿಶೀಲನೆಯ ವೇಳೆ ಕಂಡುಬಂದ ಕೊರತೆಗಳನ್ನು ನೀಗಿಸಲು ಆಡಳಿತ ಮಂಡಳಿಗೆ ಈ ಕೆಳಗಿನ ಸೂಚನೆಗಳನ್ನು ನೀಡಿದರು:
ಆಸ್ಪತ್ರೆಗೆ ತಕ್ಷಣವೇ ಅಗತ್ಯವಿರುವ ಹೆಚ್ಚುವರಿ ಎಂ.ಆರ್.ಐ ಸ್ಕ್ಯಾನಿಂಗ್ ಯಂತ್ರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ರೋಗಿಗಳ ದಾಖಲಾತಿ ಪ್ರಕ್ರಿಯೆ ಸುಗಮಗೊಳಿಸಲು ಹೆಚ್ಚಿನ ಕೌಂಟರ್‌ಗಳನ್ನು ತೆರೆಯಬೇಕು. ಮಗುವಿನ ಜನನ ಪ್ರಮಾಣಪತ್ರ ವಿತರಣೆಯಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಅನುಸರಿಸಬಾರದು.

ಇದೇ ಸಂದರ್ಭದಲ್ಲಿ ಮಾತನಾಡಿದ ಆಯೋಗದ ಸದಸ್ಯರಾದ ಎಸ್.ಕೆ.ವಂಟಗೋಡಿ ಅವರು, “ಆಸ್ಪತ್ರೆಯ ಭದ್ರತೆಯ ದೃಷ್ಟಿಯಿಂದ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಅಲ್ಲದೆ, ರೋಗಿಗಳ ಜೊತೆಗೆ ಬರುವ ಸಂಬಂಧಿಕರಿಗೆ ವಿಶ್ರಾಂತಿ ಪಡೆಯಲು ಸುಸಜ್ಜಿತ ಕಾಯುವಿಕೆ ಸ್ಥಳ ನಿರ್ಮಿಸಬೇಕು,” ಎಂದು ತಿಳಿಸಿದರು.
ಈ ಭೇಟಿಯ ಸಂದರ್ಭದಲ್ಲಿ ಬಿಮ್ಸ್ ನಿರ್ದೇಶಕರಾದ ಡಾ. ಅಶೋಕ ಕುಮಾರ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕರಾದ ಡಾ. ಈರಣ್ಣ ಪಲ್ಲೇದ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಜಗದೀಶ ಗಾಣಿಗ ಸೇರಿದಂತೆ ಆಸ್ಪತ್ರೆಯ ಹಿರಿಯ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

