ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ ವರ್ಷ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ 2026ಕ್ಕೆ ಭಾರತ ಮತ್ತು ಶ್ರೀಲಂಕಾ ದೇಶಗಳು ಆತಿಥ್ಯ ವಹಿಸಲು ಸಕಲ ಸಿದ್ಧತೆಗಳನ್ನು ಆರಂಭಿಸಿವೆ. ಫೆಬ್ರವರಿ 7 ರಿಂದ ಮಾರ್ಚ್ 8ರವರೆಗೆ ನಡೆಯಲಿರುವ ಈ ಮಹಾ ಟೂರ್ನಿಯ ಪೂರ್ಣ ವೇಳಾಪಟ್ಟಿ ಇನ್ನೂ ಘೋಷಣೆಯಾಗದಿದ್ದರೂ, 20 ತಂಡಗಳ ಸ್ಪರ್ಧೆ ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ.
ಐಸಿಸಿ ನಿಯಮಗಳ ಪ್ರಕಾರ, ಪ್ರತೀ ತಂಡವೂ ವಿಶ್ವಕಪ್ ಆರಂಭಕ್ಕೂ ಒಂದು ತಿಂಗಳ ಮುನ್ನ 15 ಸದಸ್ಯರ ಅಂತಿಮ ತಂಡವನ್ನು ಪ್ರಕಟಿಸಬೇಕಿದೆ. ಇತ್ತ, ಭಾರತ ಜನವರಿ 21 ರಿಂದ 31ರವರೆಗೆ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಆಡಲು ಸಜ್ಜಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಇದೇ ಸರಣಿಯ ತಂಡವನ್ನು ವಿಶ್ವಕಪ್ ತಂಡವಾಗಿಯೂ ಬಳಸುವ ಸಾಧ್ಯತೆಯಿದೆ ಎಂದು ವರದಿಗಳು ಹೇಳುತ್ತಿವೆ.
2024ರಲ್ಲಿ ಅಮೆರಿಕಾ–ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟೂರ್ನಿಯಲ್ಲಿದ್ದಂತೆ, ಈ ಬಾರಿ ಕೂಡ ತಂಡದಲ್ಲಿ ಹೆಚ್ಚಿನ ಬದಲಾವಣೆಗಳು ಕಾಣಿಸುವ ಸಾಧ್ಯತೆ ಕಡಿಮೆ. ಗಾಯದ ತೊಂದರೆ ಹೊರತುಪಡಿಸಿದರೆ, ಈಗಾಗಲೇ ಬಗೆಹರಿದಿರುವ ಕೋರ್ ತಂಡವೇ ಕಣಕ್ಕಿಳಿಯುವ ನಿರೀಕ್ಷೆಯಿದೆ.
2026ರ ವಿಶ್ವಕಪ್ ಮುನ್ನ ಭಾರತಕ್ಕೆ ಉಳಿದಿರುವ ಕೇವಲ 10 ಟಿ20 ಪಂದ್ಯಗಳು ತಂಡದ ರೂಪಣೆಗೆ ನಿರ್ಣಾಯಕವಾಗುತ್ತಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ.

