ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷದ ಸುದ್ದಿ. ಟಿ20 ವಿಶ್ವಕಪ್ 2026ಕ್ಕಾಗಿ ತಯಾರಿ ಈಗಾಗಲೇ ಆರಂಭಗೊಂಡಿವೆ. ಈ ಬಾರಿ ವಿಶ್ವಕಪ್‌ನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿದ್ದು, ಟೂರ್ನಿ ಫೆಬ್ರವರಿ 7 ರಿಂದ ಆರಂಭವಾಗಲಿದೆ. ವಿಶ್ವದ ಟಾಪ್ 20 ತಂಡಗಳು ಕಣಕ್ಕಿಳಿಯಲಿರುವ ಈ ಮಹತ್ವದ ಟೂರ್ನಿಯ ಸ್ಥಳಗಳ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ.
ಭಾರತದಲ್ಲಿ ಐದು ಪ್ರಮುಖ ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯಲಿದ್ದು, ಕ್ರಮವಾಗಿ ಮುಂಬೈ (ವಾಂಖೆಡೆ), ದೆಹಲಿ (ಅರುಣ್ ಜೇಟ್ಲಿ), ಕೋಲ್ಕತ್ತಾ (ಈಡನ್ ಗಾರ್ಡನ್ಸ್), ಅಹಮದಾಬಾದ್ (ನರೇಂದ್ರ ಮೋದಿ) ಮತ್ತು ಚೆನ್ನೈ (ಚೆಪಾಕ್) ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ. ಇನ್ನೊಂದೆಡೆ, ಶ್ರೀಲಂಕಾದಲ್ಲಿ ಕೊಲಂಬೊ, ಪಲ್ಲೆಕೆಲೆ, ಮತ್ತು ದಂಬುಲ್ಲಾ ಸ್ಟೇಡಿಯಂಗಳು ಸಜ್ಜಾಗಿವೆ.
ಆದರೆ ಈ ಬಾರಿ ವಿಶೇಷ ಎಂದರೆ ಪಾಕಿಸ್ತಾನದ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲೇ ಆಯೋಜಿಸಲು ನಿರ್ಧರಿಸಲಾಗಿದೆ. ಇದಕ್ಕೆ ಕಾರಣವಾಗಿ ಭಾರತವು 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಪಾಕಿಸ್ತಾನಕ್ಕೆ ಹೋಗಲು ನಿರಾಕರಿಸಿದ್ದ ವಿಚಾರ. ಆಗ ಐಸಿಸಿ “ಹೈಬ್ರಿಡ್ ಮಾದರಿ”ಯಲ್ಲಿ ಟೂರ್ನಿ ನಡೆಸಲು ಅನುಮತಿ ನೀಡಿತ್ತು ಮತ್ತು ಭಾರತದ ಪಂದ್ಯಗಳು ದುಬೈನಲ್ಲಿ ನಡೆದಿದ್ದವು. ಈಗ ಅದೇ ಮಾದರಿಯನ್ನು ಮುಂದುವರಿಸಿ, ಪಾಕ್ ತಂಡದ ಎಲ್ಲ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.
ಪಾಕಿಸ್ತಾನ ಸೆಮಿಫೈನಲ್ ಅಥವಾ ಫೈನಲ್ ಹಂತಕ್ಕೆ ತಲುಪಿದರೆ, ಆ ಪಂದ್ಯಗಳನ್ನೂ ಶ್ರೀಲಂಕಾದಲ್ಲೇ ಆಯೋಜಿಸಲಾಗುವುದು ಎಂದು ಐಸಿಸಿ ಸ್ಪಷ್ಟಪಡಿಸಿದೆ. ಆದರೆ ಪಾಕ್ ತಂಡ ನಾಕೌಟ್ ಹಂತಕ್ಕೇರದಿದ್ದರೆ, ವಿಶ್ವಕಪ್ ಫೈನಲ್ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ ಎಂದು ನಿರ್ಧಾರವಾಗಿದೆ.
ಈ ವಿಶ್ವಕಪ್‌ನಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ್, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ನ್ಯೂಝಿಲೆಂಡ್, ಅಫ್ಘಾನಿಸ್ತಾನ್, ಬಾಂಗ್ಲಾದೇಶ್ ಸೇರಿದಂತೆ ಒಟ್ಟು 20 ರಾಷ್ಟ್ರಗಳು ಭಾಗವಹಿಸಲಿವೆ.

