ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಟಿ20 ವಿಶ್ವಕಪ್ ಕ್ರಿಕೆಟ್ ಕೂಟಕ್ಕೆ ದಿನಗಣನೆ ಆರಂಭವಾಗಿದ್ದು, ಕ್ರಿಕೆಟ್ ಲೋಕದಲ್ಲಿ ಈಗಲೇ ಸಂಚಲನ ಮೂಡಿದೆ. ಈಗಾಗಲೇ ಟೀಮ್ ಇಂಡಿಯಾ ತನ್ನ 15 ಸದಸ್ಯರ ಬಲಿಷ್ಠ ಪಡೆಯನ್ನು ಪ್ರಕಟಿಸಿದ ಬೆನ್ನಲ್ಲೇ, ಇದೀಗ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ಒಟ್ಟು 10 ಪ್ರಮುಖ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿವೆ.
ಟೀಮ್ ಇಂಡಿಯಾವನ್ನು ಸ್ಪೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದು, ಆಲ್ ರೌಂಡರ್ ಅಕ್ಷರ್ ಪಟೇಲ್ ಉಪನಾಯಕನ ಜವಾಬ್ದಾರಿ ಹೊತ್ತಿದ್ದಾರೆ. ತಂಡದಲ್ಲಿ ಯುವ ಪ್ರತಿಭೆಗಳಾದ ಅಭಿಷೇಕ್ ಶರ್ಮಾ, ತಿಲಕ್ ವರ್ಮಾ ಮತ್ತು ಹರ್ಷಿತ್ ರಾಣಾಗೆ ಅವಕಾಶ ನೀಡಲಾಗಿದ್ದು, ಬುಮ್ರಾ ಮತ್ತು ಕುಲ್ದೀಪ್ ಯಾದವ್ ಬೌಲಿಂಗ್ ವಿಭಾಗದ ಶಕ್ತಿಯಾಗಿದ್ದಾರೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್ ಹ್ಯಾರಿ ಬ್ರೂಕ್ ನಾಯಕತ್ವದಲ್ಲಿ ತಾತ್ಕಾಲಿಕ ತಂಡವನ್ನು ಘೋಷಿಸಿದ್ದರೆ, ಆಸ್ಟ್ರೇಲಿಯಾ ತಂಡಕ್ಕೆ ಮಿಚೆಲ್ ಮಾರ್ಷ್ ಸಾರಥಿಯಾಗಿದ್ದಾರೆ. ಎರಡೂ ತಂಡಗಳು ಅನುಭವಿ ಮತ್ತು ಯುವ ಆಟಗಾರರ ಸಮತೋಲನಕ್ಕೆ ಒತ್ತು ನೀಡಿವೆ.
ಸೌತ್ ಆಫ್ರಿಕಾ ತಂಡವನ್ನು ಐಡೆನ್ ಮಾರ್ಕ್ರಾಮ್ ಮುನ್ನಡೆಸಲಿದ್ದು, ತಂಡದಲ್ಲಿ ಕ್ವಿಂಟನ್ ಡಿ ಕಾಕ್ ಮತ್ತು ಕಗಿಸೊ ರಬಾಡ ಅವರಂತಹ ಮ್ಯಾಚ್ ವಿನ್ನರ್ಗಳಿದ್ದಾರೆ. ಇತ್ತ ನ್ಯೂಝಿಲೆಂಡ್ ತಂಡ ಮಿಚೆಲ್ ಸ್ಯಾಂಟ್ನರ್ ನಾಯಕತ್ವದಲ್ಲಿ ಕಣಕ್ಕಿಳಿಯಲಿದ್ದು, ಡೆವೊನ್ ಕಾನ್ವೇ ಮತ್ತು ರಚಿನ್ ರವೀಂದ್ರ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ.
ಅಫ್ಘಾನಿಸ್ತಾನ್ ತಂಡಕ್ಕೆ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ನಾಯಕರಾಗಿದ್ದರೆ, ಬಾಂಗ್ಲಾದೇಶ ತಂಡಕ್ಕೆ ಲಿಟ್ಟನ್ ದಾಸ್ ನಾಯಕತ್ವದ ಹೊಣೆ ಹೊರಿಸಲಾಗಿದೆ. ಝಿಂಬಾಬ್ವೆ, ಒಮಾನ್ ಮತ್ತು ನಮೀಬಿಯಾ ತಂಡಗಳು ಕೂಡ ತಮ್ಮ ಅತ್ಯುತ್ತಮ ಆಟಗಾರರನ್ನೇ ಕಣಕ್ಕಿಳಿಸಿ ಅಚ್ಚರಿಯ ಫಲಿತಾಂಶ ನೀಡಲು ಸಜ್ಜಾಗಿವೆ.
ಘೋಷಿತ 10 ತಂಡಗಳು:
ಭಾರತ
ಇಂಗ್ಲೆಂಡ್
ಆಸ್ಟ್ರೇಲಿಯಾ
ಸೌತ್ ಆಫ್ರಿಕಾ
ನ್ಯೂಝಿಲೆಂಡ್
ಅಫ್ಘಾನಿಸ್ತಾನ್
ಬಾಂಗ್ಲಾದೇಶ
ಝಿಂಬಾಬ್ವೆ
ನಮೀಬಿಯಾ
ಒಮಾನ್

