February 17, 2026
Tuesday, February 17, 2026
spot_img

ಟಿ20 ವಿಶ್ವಕಪ್: ಆಸ್ಟ್ರೇಲಿಯಾಕ್ಕೆ ಶಾಕ್ ನೀಡಿದ ಲಂಕಾ, ಸೂಪರ್ 8ಕ್ಕೆ ಭರ್ಜರಿ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ 2026ರ ಮಹತ್ವದ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ತಂಡ ಆಸ್ಟ್ರೇಲಿಯಾವನ್ನು ಮಣಿಸಿ ಟೂರ್ನಿಯಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಸೂಪರ್ 8 ಹಂತಕ್ಕೇರಲು ಎರಡೂ ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಿದ್ದರಿಂದ ಆರಂಭದಿಂದಲೇ ಕಾದಾಟ ತೀವ್ರವಾಗಿತ್ತು. ಆದರೆ ಕೊನೆಯಲ್ಲಿ ಲಂಕಾ ಆಟಗಾರರ ಅದ್ಭುತ ಪ್ರದರ್ಶನ ಆಸ್ಟ್ರೇಲಿಯಾದ ಕನಸುಗಳಿಗೆ ತಣ್ಣೀರೆರಚಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಮತ್ತು ಟ್ರಾವಿಸ್ ಹೆಡ್ ಸ್ಫೋಟಕ ಆರಂಭ ನೀಡಿದರು. ಮೊದಲ ವಿಕೆಟ್‌ಗೆ 8.3 ಓವರ್‌ಗಳಲ್ಲಿ 104 ರನ್‌ಗಳ ಭರ್ಜರಿ ಜೊತೆಯಾಟ ನೀಡಿದ ಈ ಜೋಡಿ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ದಂತೆ ಕಂಡಿತು. ಆದರೆ ಅವರ ವಿಕೆಟ್ ಪತನದ ಬಳಿಕ ಆಸ್ಟ್ರೇಲಿಯಾ ಇನ್ನಿಂಗ್ಸ್ ಕುಸಿತ ಕಂಡು 181 ರನ್‌ಗಳಿಗೆ ಸೀಮಿತವಾಯಿತು. ಜೋಶ್ ಇಂಗ್ಲಿಸ್ 27 ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ 22 ರನ್‌ಗಳೊಂದಿಗೆ ಸ್ವಲ್ಪ ಹೋರಾಟ ತೋರಿದರು. ಲಂಕಾ ಪರ ದಶುನ್ ಹೇಮಂತ ಮೂರು ವಿಕೆಟ್ ಪಡೆದರೆ, ದುಶ್ಮಂತ ಚಮೀರಾ ಎರಡು ವಿಕೆಟ್ ಕಬಳಿಸಿದರು.

ಇದನ್ನೂ ಓದಿ:

ಗುರಿ ಬೆನ್ನಟ್ಟಿದ ಶ್ರೀಲಂಕಾ ಆರಂಭದಲ್ಲೇ ಕುಶಾಲ್ ಪೆರೆರಾ ವಿಕೆಟ್ ಕಳೆದುಕೊಂಡರೂ, ಪಾಥುಮ್ ನಿಸ್ಸಾಂಕ ಮತ್ತು ಕುಶಾಲ್ ಮೆಂಡಿಸ್ ತಂಡವನ್ನು ಹಾದಿಗೆ ತಂದು ನಿಲ್ಲಿಸಿದರು. ಮೆಂಡಿಸ್ 51 ರನ್ ಗಳಿಸಿ ಔಟಾದ ಬಳಿಕವೂ ನಿಸ್ಸಾಂಕ ಅದ್ಭುತ ಬ್ಯಾಟಿಂಗ್ ಮುಂದುವರೆಸಿ 52 ಎಸೆತಗಳಲ್ಲಿ ಅಜೇಯ 100 ರನ್ ಬಾರಿಸಿದರು. ಅವರ ನೆರವಿನಿಂದ ಲಂಕಾ ತಂಡ ಸುಲಭವಾಗಿ ಗುರಿ ತಲುಪಿತು.

ಈ ಗೆಲುವಿನೊಂದಿಗೆ ಶ್ರೀಲಂಕಾ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿದ್ದು, ಆಸ್ಟ್ರೇಲಿಯಾ ಟೂರ್ನಿಯಿಂದ ಹೊರ ಬೀಳುವ ಆತಂಕದಲ್ಲಿ ಸಿಲುಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !