ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ 2026ರಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಸೋಲು ಮುಂದುವರಿದ ಹಿನ್ನೆಲೆ ತಂಡದ ಪ್ರದರ್ಶನದ ಮೇಲೆ ಟೀಕೆಗಳು ಜೋರಾಗಿವೆ. ಮಾಜಿ ಆಟಗಾರರಾದ ಬಾಸಿತ್ ಅಲಿ, ಶಾಹಿದ್ ಅಫ್ರಿದಿ, ಮೊಹಮ್ಮದ್ ಯೂಸುಫ್ ಸೇರಿದಂತೆ ಹಿರಿಯರ ಹೊಣೆಗಾರಿಕೆಯನ್ನು ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಕ್ ಆಲ್‌ರೌಂಡರ್ ಶಾದಾಬ್ ಖಾನ್, “ನೀವು ಮಹಾನ್ ಆಟಗಾರರಾಗಿರಬಹುದು, ಆದರೆ ನಿಮ್ಮ ಕಾಲದಲ್ಲಿ ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಲು ಸಾಧ್ಯವಾಗಲಿಲ್ಲ. 2021ರಲ್ಲಿ ನಾವು ಅದನ್ನು ಸಾಧಿಸಿದ್ದೇವೆ” ಎಂದು ಹೇಳಿದರು. 2021ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು ಎಂಬುದನ್ನು ಅವರು ನೆನಪಿಸಿದರು.
ಇದನ್ನೂ ಓದಿ:
ಶಾದಾಬ್ ಹೇಳಿಕೆಗೆ ಬಾಸಿತ್ ಅಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕ್ ದಂತಕಥೆ ಸಕ್ಲೇನ್ ಮುಷ್ತಾಕ್ ಅವರನ್ನು ಅವಮಾನಿಸಿದಂತಾಗಿದೆ ಎಂದು ಆರೋಪಿಸಿದರು. ಸಕ್ಲೇನ್ ಅವರ ಪುತ್ರಿಯನ್ನು ಶಾದಾಬ್ ವಿವಾಹವಾಗಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಅಸಂಗತ ಎಂದು ಹೇಳಿದ್ದಾರೆ.
“ಮಾತಿನಲ್ಲಿ ಅಲ್ಲ, ಮೈದಾನದಲ್ಲಿ ಸಾಧನೆ ತೋರಿಸಬೇಕು” ಎಂದು ಬಾಸಿತ್ ಕಿಡಿಕಾರಿದರು. ಈ ವಾಗ್ವಾದ ಪಾಕ್ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.



