ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊನ್ನೆಯಷ್ಟೇ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ರೋಚಕ ಪಂದ್ಯದಲ್ಲಿ ಭಾರತ ಜಯಭೇರಿ ಬಾರಿಸಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಈ ಪಂದ್ಯದ ಆರಂಭಕ್ಕೂ ಮುನ್ನ ಪಾಕ್ ವೇಗಿಯೊಬ್ಬ ʼನನಗೆ ಎಂಸಿಜಿ ಮೈದಾನದ ಬಗ್ಗೆ ಎಲ್ಲವೂ ಗೊತ್ತಿದೆ. ಮೇಲ್ಬೋರ್ನ್ ಕ್ರಿಕೆಟ್ ಮೈದಾನ ನನಗೆ ತವರಿದ್ದಂತೆʼ ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದ. ಆದರೆ ಅವರ ಸಂದೇಶಕ್ಕೆ ಕಿಂಗ್ ಕೊಹ್ಲಿ ತಮ್ಮ ಬ್ಯಾಟಿನಲ್ಲೇ ಉತ್ತರಿಸಿದ್ದಾರೆ.
ಹೀಗೆ ಹೇಳಿದ್ದು ಪಾಕ್ ತಂಡದ ವೇಗಿ ಹ್ಯಾರಿಸ್ ರೌಫ್. ಅವರು ಬಿಗ್ ಬ್ಯಾಷ್ ಲೀಗ್ ನಲ್ಲಿ ಆಡುವುದರಿಂದ ಅತಿಯಾದ ಆತ್ಮವಿಶ್ವಾಸದಿಂದ ಈ ಮಾತುಗಳನ್ನು ಆಡಿದ್ದರು. “ನನಗೆ ಮೇಲ್ಬೋರ್ನ್ ತವರು ಮನೆಯಿದ್ದಂತೆ. ಇಲ್ಲಿನ ಪಿಚ್ ನ ಸ್ಥಿತಿಗತಿಗಳ ಬಗ್ಗೆ ನನಗೆ ಚೆನ್ನಾಗಿ ಅರಿವಿದೆ. ಹಾಗಾಗಿ ಭಾರತದ ವಿರುದ್ಧ ಬೌಲ್ ಮಾಡಲು ತಂತ್ರ ರೂಪಿಸಿದ್ದೇನೆ” ಎಂದು ರೌಫ್ ಹೇಳಿದ್ದರು.
ಆದರೆ ಭಾರತದ ಸ್ಟಾರ್ ಆಟಗಾರ ಕಿಂಗ್ ಕೊಹ್ಲಿ ಅವರ ಈ ಮಾತಿಗೆ ತಮ್ಮ ಬ್ಯಾಟಿನಿಂದಲೇ ಉತ್ತರಿಸಿದ್ದಾರೆ. 19ನೇಯ ಓವರಿನಲ್ಲಿ ರೌಫ್ ಅವರ ಎಸೆತಕ್ಕೆ ಎರಡೆರಡು ಸಿಕ್ಸರ್ ಗಳನ್ನು ಬಾರಿಸುವ ಮೂಲಕ ಪಾಕ್ ವೇಗಿಯ ಮಗ್ಗುಲು ಮುರಿದಿದ್ದಾರೆ. ಕೊನೆಯ ಎರಡು ಓವರ್ ನಲ್ಲಿ ಭಾರತಕ್ಕೆ ಗೆಲ್ಲಲು 31 ರನ್ ಬೇಕಿತ್ತು. ಬೌಲಿಂಗ್ ಮಾಡಲು ಬಂದ ರೌಫ್ ಅವರ ಎಸತೆಕ್ಕೆ ಕೊಹ್ಲಿ ಚೆಂಡನ್ನು ಸಿಕ್ಸರ್ ಗಡಿಯನ್ನು ದಾಟಿಸಿದ್ದರು. ಆ ಮೂಲಕ 19ನೆಯ ಓವರಿನಲ್ಲಿ ಭರ್ಜರಿ 15ರನ್ ಗಳನ್ನು ಕಲೆಹಾಕಿ ಸೋಲಿನ ಹತಾಶೆಯಿಂದ ಭಾರತದ ದೋಣಿಯನ್ನ ಗೆಲುವಿನತ್ತ ಕೊಂಡೊಯ್ದರು.
ಎಚ್ಚರಿಕೆಯಿಂದ ಆಡಿ ಎಂಬಂತೆ ಪರೋಕ್ಷ ಸಂದೇಶ ನೀಡಿದ್ದ ರೌಫ್ ಗೆ ಕೊಹ್ಲಿಯ ಎರಡು ಸಿಕ್ಸರ್ ಗಳು ಉತ್ತರ ನೀಡಿದವು. ಭಾರತವನ್ನು ಮಣಿಸುತ್ತೇವೆ ಎಂಬ ಅಹಂಕಾರದಲ್ಲಿದ್ದ ರೌಫ್ ಗೆ ಮುಖಭಂಗವಾದಂತಾಗಿತ್ತು. ಬಾಯಿ ಮಾತಿಗೆ ಕಿಂಗ್ ಕೊಹ್ಲಿ ಬ್ಯಾಟಿನಲ್ಲಿ ಉತ್ತರಿಸಿದ್ದರು.