ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ನ ಭಾಗವಾಗಿ ಇಂದು ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಣೆಸಲಿವೆ. ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಅನುಭವಿಸಿ ಅಂಕ ಪಟ್ಟಿಯಲ್ಲಿರುವ ಫಿಂಚ್ ಪಡಗೆ ಇಂದಿನ ಪಂದ್ಯ ನಿರ್ಣಾಯಕವಾಗಲಿದ್ದು ಗೆಲುವು ಅನಿವಾರ್ಯವಾಗಿದೆ.
ಆಸ್ಟ್ರೇಲಿಯಾದ ಎದುರಾಳಿ ಶ್ರೀಲಂಕಾ ಈಗಾಗಲೇ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವುದರಿಂದ ಮೊದಲನೇ ಸ್ಥಾನಕ್ಕೇರುವ ನೀರೀಕ್ಷೆಯಲ್ಲಿದೆ. ಹಾಗಾಗಿ ದಸುನ್ ಶನಕ ತಂಡಕ್ಕೂ ಈ ಗೆಲುವು ಅವಶ್ಯಕವಾಗಿದೆ. ಉಭಯ ತಂಡಗಳೂ ಗೆಲುವಿನ ನಿರೀಕ್ಷೆಯಲ್ಲಿರುವುದರಿಂದ ಬಿರುಸಿನ ಪೈಪೋಟಿ ನಿರೀಕ್ಷಿಸಲಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ 89ರನ್ ಗಳ ಹೀನಾಯ ಸೋಲನ್ನು ಆಸ್ಟ್ರೇಲಿಯಾ ಅನುಭವಿಸಿತ್ತು. ಡೇವಿಡ್ ವಾರ್ನರ್ ಆರಂಭದಲ್ಲೇ ವಿಕೆಟ್ ಒಪ್ಪಿಸಿದರೆ, ಫಿಂಚ್, ಮಿಚೆಲ್ ಮಾರ್ಶ್, ಸ್ಟೋನಿಸ್ ಹಾಗೂ ಟಿಮ್ ಡೇವಿಡ್ ಕೂಡಾ ನೀರಸ ಪ್ರದರ್ಶನ ತೋರಿದ್ದರು. ನಾಯಕ ಆರನ್ ಫಿಂಚ್ ಬ್ಯಾಟಿನಿಂದಲೂ ರನ್ ಬರದೇ ಇರುವುದು ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಲ್ಲದೇ ಮಿಚೆಲ್ ಸ್ಟಾರ್ಕ್, ಹೇಜಲ್ ವುಡ್, ಪ್ಯಾಟ್ ಕಮಿನ್ಸ್ ಹಾಗೂ ಸ್ಟೋಯ್ನಿಸ್ ರಂತಹ ಬೌಲರ್ ಗಳೂ ಕೂಡ ದಾಳಿ ಮಾಡಿ ಎದುರಾಳಿ ತಂಡವನ್ನು ಕಟ್ಟಿಹಾಕಲು ವಿಫಲವಾಗುತ್ತಿರುವುದು ಆಸ್ಟ್ರೇಲಿಯಾ ಪಾಲಿಗೆ ನುಂಗಲಾರದ ತುತ್ತಾಗಿದೆ. ಇಂದಿನ ಪಂದ್ಯದಲ್ಲಿ ಆಟಗಾರರ ಪ್ರದರ್ಶನ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಶ್ರೀಲಂಕಾ ತಂಡವು ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದು ವನಿಂದು ಹಸರಂಗ ಟ್ರಂಪ್‌ಕಾರ್ಡ್ ಆಗಿದ್ದಾರೆ. ಹಿಂದಿನ ದಾಖಲೆಗಳನ್ನು ಪರಿಗಣಿಸಿದರೆ ಕಾಂಗರೂ ನೆಲದಲ್ಲಿ ಶ್ರೀಲಂಕಾ ಒಟ್ಟು 14 ಟಿ20 ಪಂದ್ಯಗಳನ್ನಾಡಿದ್ದು 6ರಲ್ಲಿ ಗೆದ್ದಿದೆ. ಒಂದು ಪಂದ್ಯ ಟೈ ಆಗಿದೆ. ಒಟ್ಟೂ 4 ಟಿ20 ವಿಶ್ವಕಪ್ ಪಂದ್ಯಗಳಲ್ಲಿ ಒಂದು ಶ್ರೀಲಂಕಾ ಪಾಲಾಗಿದ್ದರೆ ಉಳಿದ ಮೂರರಲ್ಲಿ ಆಸ್ಟ್ರೇಲಿಯಾ ಗೆದ್ದಿದೆ.
ಸಂಭಾವ್ಯ ಆಟಗಾರರ ಪಟ್ಟಿ:
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಆಯರೋನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಟಿಮ್ ಡೇವಿಡ್ / ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್, ಜೋಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್, ಆ್ಯಡಂ ಝಂಪಾ.
ಶ್ರೀಲಂಕಾ: ಅಶೆನ್ ಬಂಡಾರ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಧನಂಜಯ ಡಿ ಸಿಲ್ವಾ, ಭಾನುಕಾ ರಾಜಪಕ್ಸೆ, ಚರಿತ್ ಅಸಲಂಕಾ, ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕಾ ಕರುಣಾರತ್ನ, ಬಿನೂರ ಫೆರ್ನಾಂಡೋ, ಮಹೇಶ್ ತೀಕ್ಷಣ, ಲಹಿರು ಕುಮಾರ.