ಹೊಸದಿಗಂತ ವರದಿ ಚಿತ್ತಾಪುರ:
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಇಂದು ಮಧ್ಯಾಹ್ನ 3 ಗಂಟೆಯಿಂದ ಸಾಯಂಕಾಲ 6.30ರ ವರೆಗೆ ಆಯೋಜನೆ ಮಾಡಿದ್ದ ಪಥಸಂಚಲನಕ್ಕೆ ಅನುಮತಿ ನೀಡಲು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ನಿರಾಕರಿಸಿದ್ದಾರೆ. ಶನಿವಾರ ರಾತ್ರಿ ಈ ಕುರಿತು ಅಧಿಕೃತ ಆದೇಶ ಹೊರಡಿಸಲಾಗಿದೆ.
ಆರೆಸ್ಸೆಸ್ ಜಿಲ್ಲಾ ವ್ಯವಸ್ಥಾಪಕ ಪ್ರಹ್ಲಾದ ವಿಶ್ವಕರ್ಮ ಅವರು ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ಅವರು, ಇದೇ ದಿನ ಭೀಮ್ ಆರ್ಮಿ ಹಾಗೂ ದಲಿತ ಪ್ಯಾಂಥರ್ ಸಂಘಟನೆಗಳೂ ಸಹ ಚಿತ್ತಾಪುರ ಪಟ್ಟಣದಲ್ಲೇ ಪಥಸಂಚಲನ ನಡೆಸಲು ಅನುಮತಿ ಕೋರಿರುವುದರಿಂದ, ಒಂದೇ ಸಮಯದಲ್ಲಿ ಹಲವು ಸಂಘಟನೆಗಳ ಮೆರವಣಿಗೆ ನಡೆಯುವುದು ಕಾನೂನು ಸುವ್ಯವಸ್ಥೆಗೆ ಅಡಚಣೆ ಉಂಟುಮಾಡುವ ಸಂಭವ ಇದೆ ಎಂದು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ಸಹ ಇದೇ ಕುರಿತು ವರದಿ ಸಲ್ಲಿಸಿದ್ದು, ಶಾಂತಿ ಭದ್ರತೆ ಕಾಪಾಡುವ ದೃಷ್ಟಿಯಿಂದ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಶಿಫಾರಸು ಮಾಡಿದೆ. ಇದರ ಆಧಾರದ ಮೇಲೆ ತಹಶೀಲ್ದಾರ್ ಅವರು ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ನಿರಾಕರಿಸುವ ಆದೇಶ ಹೊರಡಿಸಿದ್ದಾರೆ.
ಪಟ್ಟಣದಲ್ಲಿ ಎರಡು ವಿಭಿನ್ನ ಸಂಘಟನೆಗಳ ಮೆರವಣಿಗೆ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಎಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.