ಜನರಿಗೆ ಕುಡಿಯುವ ನೀರು ಸಮಸ್ಯೆ ಆಗದಂತೆ ಕ್ರಮ ವಹಿಸಿ: ಜಿ.ಪಂ ಸಿಇಒ ಕೆ.ಎಂ.ಗಾಯಿತ್ರಿ

ಹೊಸದಿಗಂತ , ಮೈಸೂರು:

ಅಧಿಕಾರಿಗಳು ಸಮಸ್ಯೆ ಇರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಹಾಗೂ ಮುಂಬರುವ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರು ಸಮಸ್ಯೆ ಆಗದಂತೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿ. ಪಂ ಸಿಇಒ ಕೆ.ಎಂ.ಗಾಯಿತ್ರಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತ್ ಅಬ್ದುಲ್ ನಜಿರ್ ಸಾಬ್ ಸಭಾಂಗಣದಲ್ಲಿ ನಡೆದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಜನರ ಕಷ್ಟವನ್ನು ಆಲಿಸಿ ಅವರ ಸಮಸ್ಯೆಗಳಿಗೆ ಮಾರ್ಗೋಪಾಯಗಳನ್ನು ತಿಳಿಸಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಪ್ರತಿಯೊಬ್ಬರಿಗೂ ನೀರು ಅತ್ಯಗತ್ಯ.

ಮುಂದೆ ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಮೊದಲು ಗ್ರಾಮಗಳಲ್ಲಿ ಇರುವ ಬಾವಿ, ಕೆರೆ, ಬೋರ್ ವೆಲ್ ಗಳಲ್ಲಿ ನೀರಿನ ಮಟ್ಟವನ್ನು ಪರೀಕ್ಷಿಸಿ ಕಡಿಮೆಯಾಗಿರುವುದು ಕಂಡುಬಂದರೆ ನೀರನ್ನು ತುಂಬಿಸಲು ಅಗತ್ಯ ಕ್ರಣ ವಹಿಸಬೇಕು ಎಂದು ತಿಳಿಸಿದರು.

ನೀರಿನ ಸಮಸ್ಯೆ ಇರುವ ಹಾಡಿಯಲ್ಲಿರವ ಜನರಿಗೆ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲು ಅಗತ್ಯ ಕ್ರಮವಹಿಸಬೇಕು. ಹಾಡಿಯಲ್ಲಿ ಸ್ಮಶಾನ, ಗೋಮಾಳ ಇತ್ಯಾದಿ ಕುಂದು-ಕೊರತೆಗಳು ಕಂಡುಬಂದರೆ ತಕ್ಷಣವೇ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಇದು ಬೇಸಿಗೆ ಸಮಯವಾದ್ದರಿಂದ ಡೀಹೈಡ್ರೇಟ್, ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ತಮ್ಮ ತಮ್ಮ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿನ ಜನರಿಗೆ ವೈದ್ಯಕೀಯ ಇಲಾಖೆಯಿಂದ ಬಂದ ಮಾಹಿತಿಯನ್ನು ತಲುಪಿಸಿ, ಅವರಿಗೆ ಸರಿಯಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಚರಂಡಿಗಳು, ರಸ್ತೆ ಬದಿಗಳು, ನೀರಿನ ಟ್ಯಾಂಕರ್ ಗಳನ್ನು, ಬೋರ್ ವೆಲ್ ಗಳನ್ನು ಸ್ವಚ್ಛಗೊಳಿಸಿ ಗ್ರಾಮವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಇದನ್ನು ಪ್ರತಿಯೊಬ್ಬ ಅಧಿಕಾರಿಯು ಒಂದು ಅಭಿಯಾನದಂತೆ ಮಾಡಿ ಗ್ರಾಮ-ಗ್ರಾಮಗಳಿಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ಇಲಾಖೆಯ ಅಧಿಕಾರಿಗಳು ತಾವು ಮಾಡುವ ಪ್ರತಿಯೊಂದು ಕೆಲಸದ ದಾಖಲೆಗಳನ್ನು ಪ್ರತ್ಯೇಕ ಫೈಲ್ ಮಾಡಬೇಕು. ಇದರಿಂದ ಎಲ್ಲಾ ಕೆಲಸಗಳ ಒಂದು ಚಿತ್ರಣ ಹುಡುಕುವುದು ಸುಲಭವಾಗುತ್ತದೆ. ಮುಖ್ಯಮoತ್ರಿಗಳ ತವರು ಜಿಲ್ಲೆಯಾದ್ದರಿಂದ ಇಲ್ಲಿ ಯಾವುದೇ ರೀತಿಯ ಕೆಲಸಗಳು ಬಾಕಿ ಉಳಿಯದಂತೆ ನೋಡಿಕೊಳ್ಳಬೇಕು. ಹಾಗೆಯೇ ಜನರಿಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಹಾಗಾಗಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದರು.

ಸಭೆಯಲ್ಲಿ ಮೈಸೂರು ಜಿಲ್ಲೆಯ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!