ಹೊಸದಿಗಂತ ವರದಿ, ತುಮಕೂರು:
ನಂದಿನಿ ಹಾಲು ಹೊರತು ಪಡಿಸಿ ರಾಜ್ಯದಲ್ಲಿ ಸರಬರಾಜುಗೊಳ್ಳುತ್ತಿರುವ ಉಳಿದೆಲ್ಲ ಬ್ರಾಂಡ್ಗಳ ಹಾಲು ವಿಷಪೂರಿತವಾಗಿದ್ದು, ಗುಣಮಟ್ಟ ಪರಿಶೀಲನಾ ಇಲಾಖೆಯ ಅಧಿಕಾರಿಗಳು ಕೂಡಲೆ ಕ್ರಮಕೈಗೊಂಡು ಜನರ ಪ್ರಾಣ ಉಳಿಸುವಂತಾಗಬೇಕು ಎಂದು ರಾಜ್ಯದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಒತ್ತಾಯಿಸಿದ್ದಾರೆ.
ಕೇಂದ್ರಪುರಸ್ಕೃತ ಯೋಜನೆಗಳ ದಿಶಾಪ್ರಗತಿ ಪರಿಶೀಲನಾ ಸಭೆ ತುಮಕೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ನಂದಿನಿ ಹೊರತುಪಡಿಸಿ ಖಾಸಗಿ ಡೈರಿಗಳಿಂದ ಪೂರೈಕೆಯಾಗುತ್ತಿರುವ ಹಾಲು ಕಲಬೆರಕೆಯಿಂದ ಕೂಡಿದ್ದು, ಸ್ಲೋ ಪಾಯ್ಸನ್ ಅನ್ನು ಜನರಿಗೆ ವಿತರಿಸುತ್ತಿದ್ದಾರೆ. ಈ ಬಗ್ಗೆ ಪಾಲಿಕೆ, ನಗರಸಭೆ ಅಧಿಕಾರಿಗಳು ಕ್ರಮವಹಿಸಿ ದಾಳಿ ನಡೆಸಬೇಕೆಂದು ಸೂಚಿಸಿದರು.
ಹಾಲಿಗೆ ವಿಷಯುಕ್ತವಾದ ಪೊಟಾಷಿಯಂ ಪರಾಕ್ಷೈಡ್ ಮಿಶ್ರಣ ಮಾಡಿ, ಅದು ಹೆಚ್ಚು ಮಂದಗಿರುವಂತೆ ಮಾಡಿ ಸರಬರಾಜು ಮಾಡಲಾಗುತ್ತಿದೆ ಎಂದರು. ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಸಂಸ್ಥೆಗಳ ಆರೋಗ್ಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದರು.
ಚೈಲ್ಡ್ ಲೇಬರ್ ಕಂಡುಬಂದಲ್ಲಿ ಅದಕ್ಕೆ ಕಡಿವಾಣ ಹಾಕಬೇಕು. ಅಂತಹ ಮಕ್ಕಳಿಗೆ ಸರ್ಕಾರದ ವೆಚ್ಚದಲ್ಲಿ ಶಿಕ್ಷಣ ಕೊಡಿಸಿ ಅವರನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು. ಸಫಾಯಿ ಕರ್ಮಚಾರಿಗಳು ಮತ್ತು ಪೌರಕಾರ್ಮಿಕರ ಮಕ್ಕಳನ್ನು ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವುದನ್ನು ನಿಲ್ಲಿಸಿ ಅವರಿಗೆ ಶಿಕ್ಷಣ ಕೊಡಿಸಲು ಶ್ರಮಿಸಬೇಕು ಎಂದರು.
ಈ ವೇಳೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ, ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ ಗಳು ಸರ್ಕಾರದ ಹಣದಲ್ಲಿ ನಡೆಯುತ್ತಿದ್ದು, ಸರ್ಕಾರದ ಸ್ಕೀಂಗಳನ್ನು ಅನುಷ್ಠಾನ ಗೊಳಿಸುವಲ್ಲಿ ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸಚಿವರು ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಿದ್ದು, 60:40ರ ಅನುಪಾತದಲ್ಲಿ ಕಾಮಗಾರಿ ಮುಂದುವರಿಸಲು ಪ್ರಸ್ತಾವನೆ ಕಳುಹಿಸುವಂತೆ ಸಹಕಾರ ಸಚಿವರಿಗೆ ತಿಳಿಸಿದರು.
ಪಾವಗಡಕ್ಕೆ ತುಂಗಭಧ್ರ ಹಿನ್ನೀರಿನ ನೀರೊದಗಿಸುವ ಯೋಜನೆ, ಎತ್ತಿನಹೊಳೆ, ತುಮಕೂರು ರಾಯದುರ್ಗ, ತುಮಕೂರು ದಾವಣಗೆರೆ ರೈಲು ಮಾರ್ಗಗಳ ಪ್ರಗತಿ ಮಾಹಿತಿಯನ್ನು ಸಚಿವರು ಅಧಿಕಾರಿಗಳಿಂದ ಪಡೆದರು.
ಶಾಸಕ ಜ್ಯೋತಿ ಗಣೇಶ್, ಎಂಎಲ್ಸಿಗಳಾದ ಚಿದಾನಂದ ಗೌಡ, ಕೆ. ಎ. ತಿಪ್ಪೇಸ್ವಾಮಿ, ಮೇಯರ್ ಪ್ರಭಾವತಿ, ಜಿಲ್ಲಾಧಿಕಾರಿ ಶ್ರೀನಿವಾಸ್, ಜಿಪಂ ಸಿಇಓ ಜಿ. ಪ್ರಭು, ಎಸ್ಪಿ ರಾಹುಲ್ ಕುಮಾರ್, ಆಯುಕ್ತೆ ಬಿ. ವಿ. ಅಶ್ವಿಜ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.