ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಲಿಬಾನ್ ಸರ್ಕಾರದ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರು ಇದೇ ಅಕ್ಟೋಬರ್ 9 ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ. 2021ರ ಆಗಸ್ಟ್‌ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಅಧಿಕಾರ ವಶಪಡಿಸಿಕೊಂಡ ನಂತರ ಇದು ಭಾರತಕ್ಕೆ ನಡೆಯುತ್ತಿರುವ ಮೊದಲ ಉನ್ನತ ಮಟ್ಟದ ಅಧಿಕೃತ ಭೇಟಿ ಎಂಬ ವಿಶೇಷತೆಯನ್ನು ಹೊಂದಿದೆ. ಈ ಮೂಲಕ ಭಾರತ-ತಾಲಿಬಾನ್ ಸಂಬಂಧದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ.
ಮುತ್ತಕಿ ಅವರ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತಾತ್ಕಾಲಿಕ ವಿನಾಯಿತಿ ನೀಡಿದ್ದು, ಅಕ್ಟೋಬರ್ 9ರಿಂದ 16ರ ನಡುವೆ ಭಾರತ ಪ್ರವಾಸ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆ ಭಾರತೀಯ ರಾಜತಾಂತ್ರಿಕ ವಲಯಗಳು ಕಳೆದ ಕೆಲವು ತಿಂಗಳುಗಳಿಂದ ಈ ಭೇಟಿಗಾಗಿ ತಯಾರಿ ನಡೆಸುತ್ತಿವೆ.
ಜನವರಿಯಿಂದಲೇ ಭಾರತ ಮತ್ತು ತಾಲಿಬಾನ್ ಪ್ರತಿನಿಧಿಗಳ ನಡುವೆ ಮಾತುಕತೆಗಳು ಸತತವಾಗಿ ನಡೆದಿದ್ದು, ದುಬೈ ಸೇರಿದಂತೆ ತಟಸ್ಥ ಸ್ಥಳಗಳಲ್ಲಿ ಎರಡೂ ದೇಶದ ಅಧಿಕಾರಿಗಳು ಭೇಟಿಯಾಗಿದ್ದಾರೆ. ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹಾಗೂ ಹಿರಿಯ ಐಎಫ್‌ಎಸ್ ಅಧಿಕಾರಿ ಜೆ.ಪಿ. ಸಿಂಗ್ ಅವರು ಮುತ್ತಕಿ ಸೇರಿದಂತೆ ತಾಲಿಬಾನ್ ನಾಯಕರೊಂದಿಗೆ ಸಂವಾದ ನಡೆಸಿದ್ದರು. ಮಾನವೀಯ ನೆರವು, ಆರೋಗ್ಯ ವಲಯ ಬಲಪಡಿಸುವುದು, ನಿರಾಶ್ರಿತರ ಪುನರ್ವಸತಿ ಮುಂತಾದ ವಿಷಯಗಳು ಚರ್ಚೆಗೆ ಬಂದಿದ್ದವು.