ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಫ್ಘಾನಿಸ್ತಾನದ ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಅವರು ದೆಹಲಿಗೆ ಆಗಮಿಸಿ ಭಾರತ ಸರ್ಕಾರದಿಂದ ಗೌರವಯುತ ಸ್ವಾಗತ ಪಡೆದಿರುವ ವಿಚಾರದಲ್ಲಿ ಬಾಲಿವುಡ್ ಗೀತರಚನೆಕಾರ ಜಾವೇದ್ ಅಖ್ತರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತೀಚೆಗೆ ಭಾರತಕ್ಕೆ ಭೇಟಿ ನೀಡಿದ ಮುತ್ತಾಕಿ ಅವರು ಭಾರತೀಯ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರನ್ನು ಭೇಟಿಯಾಗಿ ದ್ವೀಪಕ್ಷೀಯ ವಿಚಾರಗಳನ್ನು ಚರ್ಚಿಸಿದ್ದರು. ಶತ್ರುಗಳ ಶತ್ರು ಮಿತ್ರ ಎನ್ನುವ ತತ್ವದಡಿ, ಪಾಕಿಸ್ತಾನದ ವಿರುದ್ಧ ಇರುವ ಅಫ್ಘಾನಿಸ್ತಾನದೊಂದಿಗೆ ಭಾರತ ಮಾತುಕತೆ ನಡೆಸುವುದು ದೇಶದ ರಾಜತಾಂತ್ರಿಕ ತಂತ್ರದ ಭಾಗವೆಂದು ಹೇಳಬಹುದಾದರೂ, ಜಾವೇದ್ ಅಖ್ತರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಜಾವೇದ್ ಅಖ್ತರ್ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ, “ಭಾರತವು ವಿಶ್ವದ ಅತ್ಯಂತ ಕೆಟ್ಟ ಭಯೋತ್ಪಾದಕ ಗುಂಪುಗಳಾದ ತಾಲಿಬಾನ್ ಪ್ರತಿನಿಧಿಗೆ ಗೌರವ ನೀಡುತ್ತಿರುವುದನ್ನು ನೋಡಿ ನನಗೆ ನಾಚಿಕೆಯಿಂದ ತಲೆ ತಗ್ಗುತ್ತಿದೆ,” ಎಂದು ಹೇಳಿದ್ದಾರೆ. ಅಲ್ಲದೆ, ಅವರು ದಕ್ಷಿಣ ಏಷ್ಯಾದ ಅತ್ಯಂತ ಪ್ರಭಾವಶಾಲಿ ಇಸ್ಲಾಮಿಕ್ ಸೆಮಿನರಿಗಳಲ್ಲಿ ಒಂದಾಗಿರುವ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿರುವ ದಾರುಲ್ ಉಲೂಮ್ ದಿಯೋಬಂದ್ ಅನ್ನು ಕೂಡ ಟೀಕಿಸಿದರು. ಬಾಲಕಿಯರ ಶಿಕ್ಷಣವನ್ನು ನಿಷೇಧಿಸಿದ ವ್ಯಕ್ತಿಗೆ ಭಾರತ ನೀಡಿದ ಗೌರವವನ್ನು ಅಖ್ತರ್ ತಾರ್ಕಿಕವಾಗಿ ಅಸಂಗತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುತ್ತಾಕಿ ಅವರ ಈ ಭೇಟಿ 2021ರಲ್ಲಿ ತಾಲಿಬಾನ್ ಅಧಿಕಾರ ವಶಪಡಿಸಿಕೊಂಡ ನಂತರ ಭಾರತಕ್ಕೆ ನೀಡಿರುವ ಮೊದಲಾದ ಅಧಿಕೃತ ಪ್ರವಾಸವಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಬಂಧಗಳಿಗೂ ವಿನಾಯಿತಿ ನೀಡಲಾದ ನಂತರ ಈ ಭೇಟಿ ಸಾಧ್ಯವಾಯಿತು.

