ತಮಿಳುನಾಡು ವಿಧಾನಸಭೆಯಲ್ಲಿ ಕಚ್ಛತೀವು ದ್ವೀಪ ಮರಳಿ ಪಡೆಯಲು ನಿರ್ಣಯ ಅಂಗೀಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಹಿಂದೆ ಭಾರತದ ಭಾಗವಾಗಿದ್ದ ಕಚ್ಛತೀವು ದ್ವೀಪವನ್ನು ಮರಳಿ ಪಡೆಯಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.

ಈ ಮಸೂದೆ ಭಾರತೀಯ ಮೀನುಗಾರರು ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ತೋರಿಸಿದೆ. ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಮೀನುಗಾರರು ಶ್ರೀಲಂಕಾ ನೌಕಾಪಡೆಯಿಂದ ಎದುರಿಸುತ್ತಿರುವ ನಿರಂತರ ಸವಾಲುಗಳನ್ನು ಎತ್ತಿತೋರಿಸುತ್ತಿದೆ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.

ತಮಿಳುನಾಡು ಮೀನುಗಾರರ ರಕ್ಷಣೆಗೆ ಇರುವ ಒಂದೇ ಒಂದು ಶಾಶ್ವತ ಪರಿಹಾರ ಎಂದರೆ ಕಚ್ಚತೀವು ದ್ವೀಪವನ್ನು ಮರು ಪಡೆಯುವುದಾಗಿದೆ ಎಂದು ಅಧಿವೇಶನದಲ್ಲಿ ಸಿಎಂ ಸ್ಟಾಲಿನ್​ ಪ್ರತಿಪಾದಿಸಿದ್ದಾರೆ.

ಶ್ರೀಲಂಕಾದ ವಶದಲ್ಲಿ ಸದ್ಯ 97 ಭಾರತೀಯ ಮೀನುಗಾರರು ಇದ್ದು, 11 ಜನರನ್ನು ಮಾರ್ಚ್​ 27ರಂದು ಬಂಧಿಸಲಾಗಿದೆ. 2024ರಲ್ಲೇ 530 ಮೀನುಗಾರರನ್ನು ಬಂಧಿಸಲಾಗಿದೆ. 2014ರ ಚುನಾವಣಾ ಪ್ರಚಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಯಾವುದೇ ಮೀನುಗಾರರ ಬಂಧನಕ್ಕೆ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದರು. ಈ ವಿಚಾರವನ್ನು ಪ್ರಸ್ತಾಪಿಸಿದ ಸಿಎಂ ಸ್ಟಾಲಿನ್​​ ಕೇಂದ್ರ ಸರ್ಕಾರ ಭಾರತೀಯ ಮೀನುಗಾರರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಕುಟುಕಿದ್ದಾರೆ.

ಇದೇ ವೇಳೆ, ಕಚ್ಚತೀವು ಪ್ರದೇಶ ಭಾರತದಿಂದ ಕೈ ತಪ್ಪಲು ತಮಿಳುನಾಡು ಕಾರಣ ಎಂಬ ಆರೋಪವನ್ನು ನಿರ್ಣಯದಲ್ಲಿ ಅಲ್ಲಗಳೆಯಲಾಗಿದ್ದು, 1974ರಲ್ಲಿ ಕೇಂದ್ರ ಸರ್ಕಾರದಿಂದ ನಡೆಸಲಾದ ಭಾರತ – ಶ್ರೀಲಂಕಾ ಒಪ್ಪಂದಕ್ಕೆ ಮುಖ್ಯಮಂತ್ರಿ ಕರುಣಾನಿಧಿ ಅವರ ತೀವ್ರ ವಿರೋಧವಿತ್ತು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಈ ಸಂಬಂಧ ಪತ್ರ ಹಾಗೂ ಸಂಸದೀಯ ದಾಖಲೆಗಳನ್ನು ನೀಡಿರುವ ಅವರು ಕರುಣಾನಿಧಿ ಮತ್ತು ಇತರ ತಮಿಳು ನಾಯಕರು ಇದಕ್ಕೆ ಭಾರಿ ವಿರೋಧವನ್ನು ವ್ಯಕ್ತಪಡಿಸಿದ್ದರು ಎಂದು ಸ್ಪಷ್ಟಪಡಿಸಿದರು.

ಮಾಜಿ ಸಿಎಂ ಜೆ ಜಯಲಲಿತಾ ಕೂಡ ಅನೇಕ ಬಾರಿ ಈ ವಿಷಯದ ಕೂಡ ಧ್ವನಿ ಎತ್ತಿದ್ದು, 1991 ಮತ್ತು 2013ರಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸಲಾಗಿತ್ತು. 2014ರಲ್ಲಿ ಒ ಪನ್ನೀರ್​ಸೆಲ್ವಂ ಕೂಡ ಇದನ್ನು ವಿರೋಧಿಸಿದ್ದರು. ಸ್ಟಾಲಿನ್​ ಕೂಡ ಅಧಿಕಾರಕ್ಕೆ ಬಂದಾಗಿನಿಂದ ಇದರ ವಿರುದ್ಧ ಮಾತನಾಡಿದ್ದು, 1974ರ ಒಪ್ಪಂದವನ್ನು ರದ್ದು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರ ಭಾರತ – ಶ್ರೀಲಂಕಾ ಒಪ್ಪಂದವನ್ನು ಪುನರ್​ಪರಿಗಣಿಸಬೇಕು. ಹಾಗೇ ಕಚ್ಚತೀವು ದ್ವೀಪವನ್ನು ಮರಳಿ ಪಡೆಯುವ ರಾಜತಾಂತ್ರಿಕ ಪ್ರಯತ್ನಕ್ಕೆ ಮುಂದಾಗಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಲಾಗಿದೆ. ಶ್ರೀಲಂಕಾಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ, ಬಂಧನಕ್ಕೆ ಒಳಗಾಗಿರುವ ಮೀನುಗಾರರು ಮತ್ತು ವಶಕ್ಕೆ ಪಡೆದಿರುವ ಬೋಟ್​ಗಳ ಬಿಡುಗಡೆಗೆ ಮಾತುಕತೆಗೆ ಮುಂದಾಗಬೇಕು ಎಂದು ಅವರು ನಿರ್ಣಯ ಮೂಲಕ ಕೋರಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!