ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಬಿಎಸ್ಪಿ ಅಧ್ಯಕ್ಷ ಕೆ.ಆರ್ಮ್ ಸ್ಟ್ರಾಂಗ್ ಅವರ ಮೇಲೆ ಚೆನ್ನೈನ ಸೆಂಬಿಯಂನಲ್ಲಿರುವ ನಿವಾಸದ ಬಳಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಚೆನ್ನೈನ ಪೆರಂಬೂರ್‌ನಲ್ಲಿರುವ ಸದಯಪ್ಪನ್ ಸ್ಟ್ರೀಟ್‌ನಲ್ಲಿರುವ ಅವರ ನಿವಾಸದ ಬಳಿ ಶುಕ್ರವಾರ (ಜುಲೈ 5) ಸಂಜೆ 7.30ರ ವೇಳೆಗೆ ಸುಮಾರು 6 ಜನರ ಗ್ಯಾಂಗ್ ದಾಳಿ ಮಾಡಿದೆ. ಮಾರಕಾಸ್ತ್ರಗಳ ಸಮೇತ ಆಗಮಿಸಿದ ಅವರು ದಾಳಿ ನಡೆಸಿ, ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಆರ್ಮ್‌ಸ್ಟ್ರಾಂಗ್ ಅವರನ್ನು ನಗರದಲ್ಲಿರುವ ಥೌಸಂಡ್ ಲ್ಯಾಂಪ್ಸ್ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.
ತಮಿಳುನಾಡು ಬಿಎಸ್‌ಪಿ ಘಟಕದ ಅಧ್ಯಕ್ಷರಾಗಿದ್ದ ಆರ್ಮ್‌ಸ್ಟ್ರಾಂಗ್ ಅವರು ಇದಕ್ಕೂ ಮೊದಲು ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನ ಕೌನ್ಸಿಲರ್ ಆಗಿದ್ದರು. ಚುನಾವಣಾ ರಾಜಕೀಯದಲ್ಲಿ ಹೆಚ್ಚು ತೊಡಗಿಸಿಕೊಳ್ಳದ ಆರ್ಮ್‌ಸ್ಟ್ರಾಂಗ್ ಅವರು ರಾಜ್ಯದಲ್ಲಿ ದಲಿತರ ಪರ ಚಿಂತಕ, ಅಂಬೇಡ್ಕರ್‌ವಾದಿ ಎಂಬುದಾಗಿಯೇ ಹೆಚ್ಚು ಗುರುತಿಸಿಕೊಂಡಿದ್ದರು.