Saturday, December 20, 2025

ತಮಿಳುನಾಡು ಸಿನಿಮಾ ರಾಜಕೀಯ ಶುರು: ವಿಜಯ್ ಗೆ ಠಕ್ಕರ್ ನೀಡುತ್ತಾ ‘ಪರಾಶಕ್ತಿ’?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡಿನಲ್ಲಿ ಚಿತ್ರರಂಗಕ್ಕೂ ರಾಜಕೀಯಕ್ಕೂ ಬಹಳ ಆಪ್ತ ಬಂಧ. ಅಣ್ಣಾದೊರೈ, ಶಿವಾಜಿ ಗಣೇಶನ್, ಕರುಣಾನಿಧಿ, ಎಂಜಿಆರ್, ಜಯಲಲಿತಾ, ವಿಜಯ್​ಕಾಂತ್, ಶರತ್​​ಕುಮಾರ್ ಇನ್ನೂ ಹಲವಾರು ಮಂದಿ ಸಿನಿಮಾ ಸೆಲೆಬ್ರಿಟಿಗಳು ತಮಿಳುನಾಡು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗಷ್ಟೆ ನಟ ದಳಪತಿ ವಿಜಯ್ ಅವರು ರಾಜಕೀಯಕ್ಕೆ ಕಾಲಿರಿಸಿದ್ದಾರೆ.

ಆದರೆ ತಮಿಳುನಾಡಿನಲ್ಲಿ ಅಸಿನಿಮಾಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ರೂಢಿ ಇದೆ, ಈಗಲೂ ಅದೇ ನಡೆಯುತ್ತಿದೆ. ವಿಜಯ್ ಅವರು ತಮ್ಮ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಸಿನಿಮಾ ಜನವರಿ 09 ರಂದು ಬಿಡುಗಡೆ ಆಗಲಿದೆ. ಈ ಸಿನಿಮಾ ಅನ್ನು ತಮ್ಮ ರಾಜಕೀಯ ಪಯಣಕ್ಕೆ ಚಿಮ್ಮುಹಲಗೆಯಾಗಿ ವಿಜಯ್ ಬಳಸಲಿದ್ದಾರೆ. ಆದರೆ ವಿಜಯ್ ಅವರ ಈ ಸಿನಿಮಾ ರಾಜಕೀಯಕ್ಕೆ ಸಿನಿಮಾದ ಮೂಲಕವೇ ಉತ್ತರ ನೀಡಲು ಎದುರಾಳಿಗಳು ಸಜ್ಜಾಗಿದ್ದಾರೆ.

ತಮಿಳಿನ ಮತ್ತೊಬ್ಬ ಜನಪ್ರಿಯ ನಟ ಶಿವಕಾರ್ತಿಕೇಯನ್ ನಟನೆಯ ‘ಪರಾಶಕ್ತಿ’ ಸಿನಿಮಾ ಜನವರಿ 14ರಂದು ಬಿಡುಗಡೆ ಆಗಬೇಕಿತ್ತು. ಆದರೆ ವಿಜಯ್ ಅವರ ‘ಜನ ನಾಯಗನ್’ಗೆ ಪೆಟ್ಟು ಕೊಡಬೇಕೆಂದು, ಜನವರಿ 10ರಂದೇ ಸಿನಿಮಾ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಆಕಾಶ್ ಭಾಸ್ಕರನ್ ಘೋಷಿಸಿದ್ದಾರೆ.

‘ಜನ ನಾಯಗನ್’ ರೀತಿ ‘ಪರಾಶಕ್ತಿ’ ಸಿನಿಮಾ ಸಹ ರಾಜಕೀಯ ವಿಷಯವನ್ನು ಹೊಂದಿರುವ ಸಿನಿಮಾ ಆಗಿದೆ. ‘ಪರಾಶಕ್ತಿ’ ಹಿಂದಿ ಹೇರಿಕೆ, ಜಾತಿ ಪದ್ಧತಿ ಇತರೆ ರಾಜಕೀಯ ವಿಷಯಗಳನ್ನು ಸಿನಿಮಾನಲ್ಲಿ ಅಳವಡಿಸಲಾಗಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಇದೀಗ ಈ ಸಿನಿಮಾವನ್ನು ವಿಜಯ್ ಅವರ ಸಿನಿಮಾದ ಜೊತೆಗೆ ಬಿಡುಗಡೆ ಮಾಡಲಾಗುತ್ತಿದ್ದು, ಸ್ಪರ್ಧೆ ನೀಡಲಾಗುತ್ತಿದೆ.

ತಮಿಳುನಾಡು ಚಿತ್ರರಂಗದಲ್ಲಿ ಮತ್ತೊಮ್ಮೆ ಸಿನಿಮಾ ರಾಜಕೀಯ ಶುರುವಾಗಿದೆ. ಗೆಲುವು ಯಾರಿಗೆ ಆಗುತ್ತದೆ ನೋಡಬೇಕಿದೆ.

error: Content is protected !!